ಮಂಗಳವಾರ ತಡರಾತ್ರಿ ಚಿರತೆ ಹೆಜ್ಜೆ ಗುರುತು ಪತ್ತೆ: ಗ್ರಾಮಸ್ಥರ ಆತಂಕ

ಬೆಳಗಾವಿ: ತಾಲ್ಲೂಕಿನ ಹೂಲಿಕಟ್ಟಿ, ಶಿಂದೋಗಿ, ಯಕ್ಕೇರಿ ಗ್ರಾಮಗಳ ಸರಹದ್ದಿನಲ್ಲಿ ಮಂಗಳವಾರ ತಡರಾತ್ರಿ ಕೆಲವರಿಗೆ ಚಿರತೆ ಕಾಣಿಸಿಕೊಂಡಿದೆ. ಒಂದೆಡೆ ಕುದುರೆಯನ್ನು ಬೇಟೆಯಾಡಲು ಯತ್ನಿಸಿದ್ದು, ಮತ್ತೊಂದೆಡೆ ಕುರಿ ಹೊತ್ತೊಯ್ದಿದೆ.
ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಗ್ರಾಮಗಲ್ಲಿ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ.
ಮಂಗಳವಾರ ರಾತ್ರಿ ಹೂಲಿಕಟ್ಟಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಹತ್ತಿರ ಗೊರಾಬಾಳ ರಸ್ತೆಯಲ್ಲಿ ಕೆಲವರು ನಡೆದುಕೊಂಡು ಹೊರಟಿದ್ದರು. ಆ ಸಂದರ್ಭದಲ್ಲಿ ಕರ್ಕಶ ಶಬ್ದ ಮಾಡುತ್ತ ಚಿರತೆ ರಸ್ತೆಗೆ ಅಡ್ಡಲಾಗಿ ಓಡಿತು. ಅಲ್ಲಿಂದ ಕಾಲ್ಕಿತ್ತ ಜನ ಊರಿಗೆ ಬಂದು ಮಾಹಿತಿ ಮುಟ್ಟಿಸಿದರು. ತಡರಾತ್ರಿಯವರೆಗೂ ಇದೇ ವಿಷಯ ಊರಿನಲ್ಲಿ ಬಹು ಚರ್ಚೆಗೆ ಗ್ರಾಸವಾಯಿತು.
ಇದನ್ನು ಪರಿಶೀಲಿಸಲು ಬುಧವಾರ ಬೆಳಿಗ್ಗೆ ಕೆಲವು ಜನ ಸ್ಥಳದತ್ತ ಹೋದರು. ಹೊಲದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಅವು ಚಿರತೆಯ ಹೆಜ್ಜೆ ಗುರುತುಗಳು ಎಂದು ಖಚಿತಪಡಿಸಿದರು.
ಕುದುರೆ ಬೇಟೆಯಾಡಲು ಯತ್ನ: ಶಿಂದೋಗಿ ಗ್ರಾಮದ 7ನೇ ಗೇಟ್ ಹತ್ತಿರ ಅರಣ್ಯ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಕೂಡ ಕುರಿ ಕಾಯುವವರಿಗೆ ಚಿರತೆ ಕಣ್ಣಿಗೆ ಬಿದ್ದಿದೆ. ಚಿರತೆ ಕಂಡು ಕುರಿಗಾಹಿಗಳು ಸ್ಥಳದಿಂದ ಓಡಿದರು.
ಕುರಿ ಹಿಂಡಿನ ಜತೆಗಿದ್ದ ಕುದುರೆ ಮೇಲೆ ದಾಳಿ ಮಾಡಿದ ಚಿರತೆ ಹೊಟ್ಟೆ ಭಾಗಕ್ಕೆ ಕಚ್ಚಿ ತೀವ್ರ ಗಾಯ ಮಾಡಿದೆ. ಅಷ್ಟರಲ್ಲಿ ಕುರಿಗಳು ಚೆಲ್ಲಾಪಿಲ್ಲಿಯಾಗಿ ಓಡಿದರು. ಕುದುರೆಯನ್ನು ಬಿಟ್ಟ ಚಿರತೆ, ಕುರಿಯನ್ನು ಎಳೆದುಕೊಂಡು ಓಡಿತು ಎಂದು ಪ್ರತ್ಯಕ್ಷ್ಯದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಕುರಿಗಾಹಿಗಳು ಘಟನಾವಳಿಯ ಮಾಹಿತಿ ನೀಡಿದರು. ಇನ್ನೊಂದೆಡೆ, ಯಕ್ಕೇರಿ ಗ್ರಾಮದ ಹೊರವಲಯದಲ್ಲೂ ಚಿರತೆ ಹೆಜ್ಜೆ ಗುರುತುಗಳು ಸಿಕ್ಕಿವೆ.
***
ಚಿಕ್ಕೋಡಿ ತಾಲ್ಲೂಕಿನಲ್ಲೂ ಪತ್ತೆ
ಬೆಳಗಾವಿ: ಸವದತ್ತಿ ತಾಲ್ಲೂಕಿನ ಶಿಂದೋಗಿ ಅರಣ್ಯ ಪ್ರದೇಶದಲ್ಲಿ ಈಚೆಗೆ ಚಿರತೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನೂ ಒಂದಷ್ಟು ಚಿರತೆಗಳು ಇರಬಹುದು ಎಂಬ ಅನುಮಾನದಲ್ಲಿ ಹುಡುಕಾಟ ನಡೆದಿತ್ತು.
ಚಿರತೆಯು ನರಗುಂದ, ನವಲಗುಂದ ಅರಣ್ಯ ಪ್ರದೇಶ ಭಾಗದಿಂದ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.
ಇನ್ನೊಂದೆಡೆ, ಚಿಕ್ಕೋಡಿ ತಾಲ್ಲೂಕಿನ ಚಂದೂರ ಟೇಕ್ ಗ್ರಾಮದ ಹೊರವಲಯದಲ್ಲಿ ವಾರದ ಹಿಂದೆ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಯಡೂರ, ಚಂದೂರ, ಯಡೂರವಾಡಿ, ಚಂದೂರ ಟೇಕ್ ಗ್ರಾಮಗಳಲ್ಲಿ ಕಳೆದ ಎರಡು ವಾರಗಳಿಂದ ಚಿರತೆ ಓಡಾಡುತ್ತಿದೆ ಎಂದು ಇಲಾಖೆಯ ಗಮನಕ್ಕೆ ತರಲಾಗಿದೆ.
ಆದರೆ, ಇದೂವರೆಗೆ ಅಲ್ಲಿ ಚಿರತೆಯ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ವಲಯ ಅರಣ್ಯಧಿಕಾರಿ ಪ್ರಶಾಂತ ತಿಳಿಸಿದ್ದಾರೆ.
****
ಚಿರತೆ ಸೆರೆಗೆ ಸಿದ್ಧತೆ, ಡಂಗೂರ
ಸವದತ್ತಿ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಡಂಗೂರ ಹಾಗೂ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಕತ್ತಲಾದ ಮೇಲೆ ಗ್ರಾಮದ ಹೊರ ಹೋಗದಂತೆ ಪ್ರಚಾರ ಮಾಡಲಾಗುತ್ತಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಹೀರೆನಟ್ಟಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಅಂತರಗಟ್ಟಿ, ಪಿಡಿಒ ರಮೇಶ ಬೆಟಸೂರು, ಮಹಾದೇವಪ್ಪ ಕಳ್ಳಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ಮಂಗಳವಾರ ರಾತ್ರಿಯಿಂದ ಅಲ್ಲಿಯೇ ಗಸ್ತು ಏರ್ಪಡಿಸಿ, ಚಿರತೆಯ ಶೋಧ ಕಾರ್ಯ ಮುಂದುವರಿಸಿದರು. ಎರಡು ಬಲಿಗಳನ್ನು ತಂದು ಚಿರತೆ ಓಡಾಡಿದ ಸ್ಥಳಗಳಲ್ಲಿ ಇರಿಸಿದರು.