ಯುವತಿ ಹೆಸರಲ್ಲಿ ಮಾಡಬಾರದ್ದು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪಿಎಸ್ಐ ಉದ್ಯೋಗಾಕಾಂಕ್ಷಿ! ಯುವಕರೇ ಈತನ ಟಾರ್ಗೆಟ್.

ಬೆಳಗಾವಿ: ಪಿಎಸ್ಐ ಉದ್ಯೋಗಾಕಾಂಕ್ಷಿಯೊಬ್ಬ ಬೆಳಗಾವಿ ಮೂಲದ ಯುವತಿ ಹೆಸರಿನಲ್ಲಿ ಮಾಡಬಾರದ್ದು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಮಹಾಂತೇಶ ಮೂಡಸೆ (28) ಬಂಧಿತ.
ಮೂರು ವರ್ಷಗಳಿಂದ ಪಿಎಸ್ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈತ ಇತ್ತಿಚೇಗೆ ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದ ಎಂದು ತಿಳಿದು ಬಂದಿದೆ.
ಯುವಕರೇ ಈತನ ಟಾರ್ಗೆಟ್: ಆರೋಪಿ ಮಹಾಂತೇಶ ಮೂಡಸೆ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಯುವಕರಿಂದ ಸುಮಾರು 19.80 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಯುವತಿ ಹೆಸರಿನಲ್ಲಿ ಹಣ ಸುಲಿಗೆ ಮಾಡಿ ಗೋವಾಕ್ಕೆ ತೆರಳಿ ಮೋಜು ಮಾಡುತ್ತಿದ್ದ.
ಎಂ.ಸ್ನೇಹಾ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿದ್ದ ಈತ, ಫೇಸ್ಬುಕ್ನಲ್ಲಿ ಬೆಳಗಾವಿ ನಗರದ ಯುವತಿಯೊಬ್ಬಳ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಆ ಅಕೌಂಟ್ಗೆ ಅಪ್ಲೋಡ್ ಮಾಡಿ, ಅದನ್ನು ನಿರ್ವಹಿಸುತ್ತಿದ್ದ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಯುವಕರೊಂದಿಗೆ ಗೆಳೆತನ ಬೆಳೆಸಿಕೊಂಡು ನಾನು ಸ್ನೇಹಾ ಎಂದು ನಂಬಿಸಿ ಮೊಬೈಲ್ ನಂಬರ್ ಪಡೆಯುತ್ತಿದ್ದ. ವಾಟ್ಸ್ಆಯಪ್ನಲ್ಲಿ ಚಾಟ್ ಮಾಡುತ್ತಿದ್ದ. ಈ ವಾಟ್ಸ್ಆಯಪ್ಗೆ ಡಿಪಿ ಕೂಡ ಆ ಯುವತಿಯ ಫೋಟೋಗಳನ್ನೇ ಹಾಕಿ ಅನುಮಾನ ಬಾರದಂತೆ ನೋಡಿಕೊಂಡಿದ್ದ. ಹೀಗೆ ಚಾಟ್ ಮಾಡಿ ಸಲುಗೆ ಬೆಳೆಸಿ ಅವರಿಂದ ಹಣ ಪಡೆದು ಅವರ ಮೊಬೈಲ್ ನಂಬರ್ ಬ್ಲಾಕ್ ಮಾಡುತ್ತಿದ್ದ. ಬಳಿಕ ಮತ್ತೊಬ್ಬ ಯುವಕನಿಗೆ ಗಾಳ ಹಾಕುತ್ತಿದ್ದ. ಹೀಗೆ 3 ವರ್ಷದಲ್ಲಿ ಬರೋಬ್ಬರಿ 19.80 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಈತನ ನಕಲಿ ಅಕೌಂಟ್ಗೆ ಫೇಸ್ಬುಕ್ನಲ್ಲಿ 15 ಸಾವಿರ ಪಾಲೋವರ್ಸ್ ಇದ್ದಾರೆ!
ಪತ್ತೆಯಾಗಿದ್ದು ಹೇಗೆ?: ಯಾರೋ ತನ್ನ ಫೋಟೋಗಳ ಬಳಸಿಕೊಂಡು ನಕಲಿ ಅಕೌಂಟ್ ತೆರೆದಿರುವ ವಿಚಾರವನ್ನ ಹೇಗೋ ತಿಳಿದ ಯುವತಿ, ಖುದ್ದಾಗಿ ಮಹಾಂತೇಶಗೆ ಮೆಸೇಜ್ ಮಾಡಿ ಅಕೌಂಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಳು. ಆದರೂ ಆತ ಕ್ಯಾರೆ ಎಂದಿರಲಿಲ್ಲ. ಈತನ ವರ್ತನೆಯಿಂದ ಬೇಸತ್ತ ಯುವತಿ, ಜು.4ರಂದು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಪ್ರಕರಣ ಬೆನ್ನತ್ತಿದ ಪೊಲೀಸರು ಜು.20ರಂದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.