ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ವಿತರಣೆ: ಕಟುಕರಿಗೆ ಶಿಕ್ಷೆ ಕೊಡಿಸದೆ ಬಿಡಲ್ಲ ಎಂದ ಸಿಎಂ

ಮಂಗಳೂರು: ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಗುರುವಾರ ಸಂಜೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಪ್ರವೀಣ್ ಹತ್ಯೆ ಅತ್ಯಂತ ಅಮಾನವೀಯ. ಇದೊಂದು ಪೂರ್ವ ಯೋಜಿತ ಕೃತ್ಯ. ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಹತ್ತು ವರ್ಷದಿಂದ ಸಮಾಜಘಾತುಕಶಕ್ತಿಗಳ ಕೃತ್ಯ ಹೆಚ್ಚಾಗಿದೆ. ಕೇರಳದಿಂದಲೂ ಈ ರೀತಿಯ ಕೃತ್ಯಕ್ಕೆ ಪ್ರೇರಣೆ ಸಿಕ್ಕಿದೆ. ಕೇವಲ ಕೊಲೆ ಪ್ರಕರಣ ಅಲ್ಲ, ದೇಶವನ್ನು ಛಿದ್ರ ಮಾಡುವ ಕೃತ್ಯ. ಈಗಾಗಲೇ ತನಿಖೆ ಆರಂಭವಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನೂ ಬಂಧಿಸಲಾಗವುದು. ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ, ಅವರೊಬ್ಬ ದಕ್ಷ ಅಧಿಕಾರಿ. ಈಗಾಗಲೇ ಎನ್ಐಎ ಕರ್ನಾಟಕಕ್ಕೆ ಬೇಡಿಕೆ ಇದೆ. ಮಂಗಳೂರು ಭಾಗಕ್ಕೆ ಆದಷ್ಟು ಬೇಗ ಎನ್ಐಎ ತರ್ತೇವೆ. ಎನ್ಐಎಗೆ ತನಿಖೆ ಕೊಡುವ ಚಿಂತನೆ ಇದೆ. ಈ ಕೃತ್ಯಕ್ಕೆ ಬೆಂಬಲ ಕೊಟ್ಟ ಜಾಲವನ್ನ ಬೇಧಿಸುತ್ತೇವೆ. ಪ್ರವೀಣ್ರ ಮಡದಿಯೂ ಅದೇ ಬೇಡಿಕೆ ಇಟ್ಟಿದ್ದಾರೆ ಎಂದು ಸಿಎಂ ಹೇಳಿದರು.
‘ನನಗೆ ಬಂದ ಗತಿ ಮುಂದೆ ಯಾರಿಗೂ ಬರಬಾರದು. ಈ ಕೊಲೆಯ ಘಟನೆಗಳು ಇಲ್ಲಿಗೆ ಕೊನೆಗೊಳ್ಳಬೇಕು’ ಎಂದು ಪ್ರವೀಣ್ರ ಪತ್ನಿ ನೂತನ, ಸಿಎಂ ಬಳಿ ಗದ್ಗದಿತರಾದರು. ಇದೇ ವೇಳೆ ನೆರೆದಿದ್ದ ಜನ, ಬುಧವಾರ ಪ್ರವೀಣ್ ಪಾರ್ಥಿವ ಶರೀರ ಯಾತ್ರೆ ವೇಳೆ ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದರು.
ಪ್ರವೀಣ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂ. ನೀಡಿದ್ದೇವೆ. ಕುಟುಂಬಸ್ಥರ ಮುಂದಿನ ಭವಿಷ್ಯಕ್ಕೆ ಎಲ್ಲ ಸಹಕಾರ ನೀಡ್ತೇವೆ. ಕಟುಕರಿಗೆ ಶಿಕ್ಷೆ ಆದಾಗ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ಎಂದು ಸಿಎಂ ಹೇಳಿದರು.