
ಚಿಕ್ಕಮಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಚಿತ್ರ ಪ್ರದರ್ಶನದ ವೇಳೆಯೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಚಿಕ್ಕಮಗಳೂರಿನ ಮಿಲನ ಥಿಯೇಟರ್ ಬಳಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಯುವಕರ ನಡುವೆ ಗಲಾಟೆ ನಡೆದಿದೆ. ವಾಗ್ವಾದ ತಾರಕಕ್ಕೇರಿ ಥಿಯೇಟರ್ ಮುಂದೆ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಭರತ್ ಎಂಬ ಯುವಕನನ್ನು ಮತ್ತೊಂದು ಯುವಕರ ಗುಂಪು ಮನ ಬಂದತೆ ಥಳಿಸಿದೆ.
ಯುವಕರ ಏಟಿಗೆ ಗಂಭೀರವಾಗಿ ಗಾಯಗೊಂಡ ಯುವಕ ಭರತ್ ನೆಲಕ್ಕೆ ಬಿದ್ದು ಒದ್ದಾಡುತಿದ್ದರೂ ಬಿಡದೆ ಹೊಡೆದಿದ್ದಾರೆ. ಗಾಯಾಳು ಯುವಕ ಭರತ್ ನನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.