ಫಾಜಿಲ್ ಹತ್ಯೆ ಪ್ರಕರಣ : ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ದಕ್ಷಿಣ ಕನ್ನಡ : Fazil’s final darshan : ಕರಾವಳಿ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಒಟ್ಟು ಮೂರು ಕೊಲೆಗಳು ನಡೆದಿರುವುದು ಇಡೀ ಮಂಗಳೂರನ್ನು ಬೆಚ್ಚಿ ಬೀಳಿಸಿದೆ. ಮಸೂದ್, ಪ್ರವೀಣ್ ನೆಟ್ಟಾರು ಬಳಿಕ ಇದೀಗ ಫಾಜಿಲ್ ಕೂಡ ಹತ್ಯೆಯಾಗಿರುವುದು ಬುದ್ಧಿವಂತರ ಜಿಲ್ಲೆ ಕೊಲೆಗಡುಕರ ಜಿಲ್ಲೆಯಾಗಿ ಬದಲಾಗುತ್ತಿದೆಯಾ ಎಂಬ ಆತಂಕವನ್ನು ಹುಟ್ಟು ಹಾಕಿದೆ.
ನಿನ್ನೆ ಸುರತ್ಕಲ್ನಲ್ಲಿ ಬರ್ಬರವಾಗಿ ಕೊಲೆಯಾದ ಫಾಜಿಲ್ರನ್ನು ದಫನ್ ಮಾಡುವುದಕ್ಕೂ ಮುನ್ನ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸುರತ್ಕಲ್ ಹೊರ ವಲಯದ ಮಂಗಲ್ಪೇಟೆಯಲ್ಲಿರುವ ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ಫಾಜಿಲ್ ಮೃತದೇಹವನ್ನು ಇರಿಸಲಾಗಿದೆ. 23 ವರ್ಷದ ಫಾಜಿಲ್ ಮೃತದೇಹದ ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಜುಮ್ಮಾ ಮಸೀದಿಯತ್ತ ಆಗಮಿಸುತ್ತಿದ್ದು ಜನ ಸಾಗರವೇ ನೆರೆದಿದೆ. ಕೇವಲ ಸುರತ್ಕಲ್ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಮುಸ್ಲಿಮರು ಫಾಜಿಲ್ ಅಂತಿಮ ದರ್ಶನ ಪಡೆಯಲು ಧಾವಿಸುತ್ತಿದ್ದು ಪರಿಸ್ಥಿತಿ ನಿಯಂತ್ರಣ ಕೈ ತಪ್ಪುತದೆಯೋ ಎಂಬ ಆತಂಕ ಕೂಡ ಆರಂಭಗೊಂಡಿದೆ. ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದ ಬಳಿಕ ಫಾಜಿಲ್ ಮೃತದೇಹವನ್ನು ಮಸೀದಿಯ ಹಿಂಭಾಗದಲ್ಲಿಯೇ ಇರುವ ದಫನ್ ಭೂಮಿಯಲ್ಲಿ ಮಣ್ಣು ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸುರತ್ಕಲ್ ಹೈವೇನಿಂದ ಎಂಆರ್ಪಿಎಲ್ ರಸ್ತೆಗೆ ಬದಲಿ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಫಾಜಿಲ್ ಕುಟುಂಬಸ್ಥರು ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲಿಕ್ಕೋಸ್ಕರ ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಡಿ ಎಂದು ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಸುರತ್ಕಲ್ನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.