400 ಮಹಿಳೆಯರನ್ನುಗುರಿಯಾಗಿಸಿಕೊಂಡಿದ್ದ ಯುವಕನ ಪ್ರಚಂಡ ಬುದ್ಧಿಗೆ ಪೊಲೀಸರೇ ದಂಗು !

ಮುಂಬೈ: ಯುವಕನೊಬ್ಬ ತನ್ನ ಅಪರಾಧಿಕ ಕೃತ್ಯಕ್ಕೆ ಒಂದು ತಿಂಗಳಿನಿಂದ 400 ಮಹಿಳೆಯರನ್ನು ಗುರಿಯಾಗಿಸಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಗುಜರಾತ್ ಮೂಲದ ಆದಿತ್ಯ ರವೀಂದ್ರ (19) ಎಂಬಾತನೇ ಈ ಪ್ರಚಂಡ. ಆತನ ವಿರುದ್ಧ 22 ಮಹಿಳೆಯರು ಈತನ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತಿತರ ದೂರುಗಳನ್ನು ದಾಖಲಿಸಿದ ನಂತರ ಗುಜರಾತ್ನ ಗಾಂಧಿದಾಮ್ನಿಂದ ಆಂಟಾಪ್ ಹಿಲ್ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಈತ ಸೋಶಿಯಲ್ ಮೀಡಿಯಾಗಳಲ್ಲಿರುವ ಮಹಿಳೆಯರು, ಯುವತಿಯರ ಫೋಟೊಗಳನ್ನು ತೆಗೆದುಕೊಂಡು ಅಶ್ಲೀಲ ಚಿತ್ರಗಳಿಗೆ ಜೋಡಿಸುತ್ತಿದ್ದ. ನಂತರ ಅದನ್ನು ಆಯಾ ಮಹಿಳೆಯರಿಗೆ ಕಳುಹಿಸಿ ಹಣ ಕೊಡದಿದ್ದರೆ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಇ-ವ್ಯಾಲೆಟ್ ಸೇವೆಗಳ ಮೂಲಕ ಅವರಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ.
ಕಳೆದ ಮೂರು ದಿನಗಳಿಂದ ಪೊಲೀಸರು ರವೀಂದ್ರನ ಕ್ರಿಮಿನಲ್ ಚಟುವಟಿಕೆಗಳ ಮಾಹಿತಿ ಕಲೆ ಹಾಕಲು ಆರಂಭಿಸಿದ್ದು ಯುವಕನ ವಯಸ್ಸಿಗೆ ಮೀರಿದ ಕ್ರಿಮಿನಲ್ ಬುದ್ಧಿ ಹಾಗೂ ಚಟುವಟಿಕೆಗಳನ್ನು ಕಂಡು ದಂಗಾಗಿದ್ದಾರೆ.
ಆರೋಪಿ ಯುವಕ ಸುಮಾರು 400 ಮಹಿಳೆಯರ ಮಾರ್ಫಿಡ್ ಕ್ಲಿಪ್ಗಳನ್ನು ತಯಾರಿಸಿದ್ದಾನೆ. ಮತ್ತು ಹಣದ ಬೇಡಿಕೆಯೊಂದಿಗೆ ಆ ಕ್ಲಿಪ್ಗಳನ್ನು ಮಹಿಳೆಯರಿಗೆ ಕಳುಹಿಸಿದ್ದಾನೆ. ಆತನ ಅಪರಾಧಗಳ ವ್ಯಾಪ್ತಿ ಭಾರತದ ಹಲವಾರು ನಗರಗಳಿಗೆ ವಿಸ್ತರಿಸಿದೆ ಎಂದು ಆಂಟಾಪ್ ಹಿಲ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ನಾಸಿರ್ ಕುಲಕರ್ಣಿ ಹೇಳಿದ್ದಾರೆ.
ತಮ್ಮ ಪ್ರದೇಶದಲ್ಲಿ ಮಹಿಳೆಯರಿಂದ ಇದೇ ರೀತಿಯ ದೂರುಗಳು ಬಂದಿವೆಯೇ ಎಂದು ಕಂಡುಹಿಡಿಯಲು ಪೊಲೀಸರು ಈಗಾಗಲೇ ಮುಂಬೈನ ವೆರ್ಸೋವಾ, ಮಲಾಡ್ ಮತ್ತು ಗೋರೆಗಾಂವ್ ಮತ್ತಿತರ ಪೊಲೀಸ್ ಠಾಣೆಗಳಿಗೆ ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ವರ್ಷದಿಂದಲೇ ಪ್ರಾರಂಭಿಸಿದ್ದ:
ರವೀಂದ್ರ ಈ ವರ್ಷಾರಂಭದಲ್ಲಿ ಇಂಥ ಕುಕೃತ್ಯ ಆರಂಭಿಸಿದ್ದ. ಈ ವರ್ಷ ಜೂನ್ 25 ರಂದು ಮೊದಲ ಬಾರಿ ಕೃತ್ಯಕ್ಕೆ ಕೈ ಹಾಕಿದ್ದಾನೆ. ತನ್ನ ಗೆಳತಿಯಿಂದ ಬೇರ್ಪಟ್ಟ ನಂತರ ಕೃತ್ಯ ಶುರುವಿಟ್ಟುಕೊಂಡು ಅಪಾರ ಹಣ ಗಳಿಸಲು ಹೊಂಚು ಹಾಕಿದ್ದಾನೆ ಎಂದು ವಿಚಾರಣೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.