ಮಹಿಳೆಯರಿಗೆ ಪಂಗನಾಮ ಹಾಕಿದ್ದ ಖತರನಾಕ್ ಆಸಾಮಿ ಆರೋಪಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಪೊಲೀಸರು ಯಶಸ್ವಿ

ಬೆಳಗಾವಿ – ಸುಲಭವಾಗಿ ಮನೆಯಲ್ಲಿದ್ದೇ ಹಣಗಳಿಸಬಹುದು ಎಂದು ಆಮಿಷ ತೋರಿಸಿ ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ ಹಾಕಿದ್ದ ವ್ಯಕ್ತಿಯನ್ನು ಬೆಳಗಾವಿಯ ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದ ಸಂದರ್ಭವನ್ನೇ ಬಳಸಿಕೊಂಡು ಮನೆಯಲ್ಲಿರುವ ಮಹಿಳೆಯನ್ನು ಟಾರ್ಗೆಟ್ ಮಾಡಿಕೊಂಡು ಮಹಿಳೆಯರಿಗೆ ಆಮಿಷ ತೋರಿಸಿ ಲಕ್ಷಾಂತರೂ ಎಗರಿಸಿದ್ದ ಶಿವಮೊಗ್ಗ ಮೂಲದ ದಿವಾಕರ ಆಳ್ವ (54) ಎನ್ನುವ ವ್ಯಕ್ತಿ ಬಂಧಿತ.
ನನಗೆ ಇನ್ಫೋಸಿಸ್ ಸುಧಾ ಮೂರ್ತಿ, ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳು, ಕಂಪನಿಗಳು ಪರಿಯಚ ಎಂದು ಹೇಳಿಕೊಂಡು ಗೃಹಿಣಿಯರನ್ನು ಯಾಮಾರಿಸಿ ಈತ ಹಣ ಲಪಟಾಯಿಸಿದ್ದ.
ಭಾಗ್ಯನಗರದಲ್ಲಿ ಮನೆ ಬಾಡಿಗೆ ಪಡೆದು ಮನೆಯ ಮಾಲೀಕರಿಗೆ ನನ್ನದು ದೊಡ್ಡ ಕಂಪನಿ ಇದೆ ಎಂದು ನಂಬಿಸಿದ್ದ ದೀವಾಕರ, ಮಹಿಳೆಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ವಿವಿಧ ಹುದ್ದೆಗಳಿಗೆ ಇಂತಿಷ್ಟು ಹಣ ಎಂದು ಮೋಸ ಮಾಡಿದ್ದಾನೆ ಎಂದು ಹಣ ನೀಡಿದ ಮಹಿಳೆಯರು ದೂರಿದ್ದಾರೆ.
ಅಲ್ಲದೆ, 10 ಜನರ ಮಹಿಳೆಯರ ಮೊಬೈಲ್ ನಂಬರ್ ಪಡೆದು, ಉದ್ಯೋಗದ ಜಾಹಿರಾತು ತೋರಿಸಿ ವಾಟ್ಸಪ್ ಗ್ರೂಪ್ ರಚಿಸಿ, ಗುಡ್ ನೈಟ್, ಗುಡ್ ಮಾರ್ನಿಂಗ್ ಮೆಸೇಜ್ ಹಾಕಿದರೆ ಸಾಕು ನಿಮಗೆ ತಿಂಗಳಿಗೆ 20 ಸಾವಿರ ರೂ ಸಂಬಳ ಬರುತ್ತದೆ ಎಂದೂ ನಂಬಿಸಿದ್ದ.
ಇದೀಗ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಆತನ ನಿಜ ಬಂಡವಾಳ ಹೊರಹಾಕಲಿದ್ದಾರೆ.