ಅಕ್ರಮ ಪಡಿತರ ಅಕ್ಕಿ ಸಂಗ್ರಹ ಆರೋಪ : ಓರ್ವನ ಬಂಧನ

ಕುಂದಾಪುರ: ತಲ್ಲೂರು ಗ್ರಾಮದ ಪಾರ್ತಿಕಟ್ಟೆ ರಸ್ತೆಯ ಮುನಾಫ್ ಅವರ ಮನೆ ಬಳಿ ಸರಕಾರದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು, ಅಧಿಕಾರಿಗಳು ಭೇಟಿ ನೀಡಿ, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆತ ದಾಸ್ತಾನಿರಿಸಿದ್ದ 45 ಸಾವಿರ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಅವರೊಂದಿಗೆ ಎಸ್ಐ ಸದಾಶಿವ ಗವರೋಜಿ ಮತ್ತು ಸಿಬಂದಿ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಆರೋಪಿ ಅಬ್ದುಲ್ ಮುನಾಫ್ನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ 80 ಸಾವಿರ ರೂ. ಮೌಲ್ಯದ ರಿಕ್ಷಾ, 3 ಸಾವಿರ ರೂ. ಮೌಲ್ಯದ ಎಲೆಕ್ಟ್ರಾನಿಕ್ ತೂಕದ ಯಂತ್ರ, ರೂಮಿನಲ್ಲಿದ್ದ 50 ಕೆ.ಜಿ. ತೂಕದ 39 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ 2,050 ಕೆ.ಜಿ. ತೂಕದ 45,100 ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು ಯಾರಿಂದಲೋ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.