ನೆರೆ ಪೀಡಿತರ ನೆರವಿಗೆ ನಿಖಿಲ್ ಕುಮಾರಸ್ವಾಮಿ, 2 ಸಾವಿರ ಕುಟುಂಬಕ್ಕೆ ದಿನಸಿ, ಬಟ್ಟೆ ವಿತರಣೆ
ಕಳೆದ ವಾರ ಸುರಿದ ಭಾರಿ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಿತ್ರ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ನೆರೆ ಸಂತ್ರಸ್ಥರನ್ನು ಭೇಟಿಯಾಗಿ ‘ನಿಮ್ಮೊಡನೆ ನಾವಿದ್ದೇವೆ’ ಎಂದು ಧೈರ್ಯ ಹೇಳಿದಲ್ಲದೇ ಬಟ್ಟೆ ಹಾಗೂ ಫುಡ್ ಕಿಟ್ ವಿತರಣೆ ಮಾಡಿದರು.
ರಾಮನಗರದ ಟಿಪ್ಪುನಗರ, ಅರ್ಕೇಶ್ವರ ಕಾಲೋನಿ, ಜಿಯಾ ಉಲ್ಲಾ ಬ್ಲಾಕ್, ಯಾರಬ್ ನಗರ ಸೇರಿದಂತೆ ಇನ್ನಿತರೆ ಬಡಾವಣೆಗಳಿಗೆ ಭೇಟಿ ನೀಡಿ ಮಳೆ ಹಾಗೂ ಪ್ರವಾಹದಿಂದಾದ ಅನಾಹುತಗಳನ್ನು ಕಣ್ಣಾರೆ ವೀಕ್ಷಿಸಿದರು. ನಿವಾಸಿಗಳ ಸಂಕಷ್ಟಗಳನ್ನು ಆಲಿಸಿ ಮರುಕ ವ್ಯಕ್ತಪಡಿಸಿದರು.
ಮಳೆ ಸೃಷ್ಟಿಸಿದ ಅವಾಂತರಗಳನ್ನು ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ ನಿಮ್ಮೊಂದಿಗೆ ನಾವಿದ್ದೇವೆ, ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ ಎಂದು ಸಂತ್ರಸ್ಥರಿಗೆ ಧೈರ್ಯ ತುಂಬಿದರು, ತುರ್ತಾಗಿ ಈ ಪರಿಹಾರವನ್ನು ನೀಡಲಾಗುತ್ತಿದೆ. ಮುಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಮನಗರ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿ ಇತಿಹಾಸದಲ್ಲಿಯೇ ಇಂತಹ ರಣಮಳೆ ಸುರಿದಿರಲಿಲ್ಲ. ಧಾರಾಕಾರವಾಗಿ ಮಳೆ ಸುರಿದು ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದರು.
ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಅಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಜತೆಗೆ ಒತ್ತಡ ಹೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಕರೆಸಿ, ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಶೇಷ ಪ್ಯಾಕೇಜ್ ದೊರೆಯುವ ಭರವಸೆ ಇದೆ ಎಂದರು.
ಊಟ ಹಾಗೂ ಬಟ್ಟೆ ವಿತರಣೆ
ಪ್ರವಾಹದ ನೀರು 6 ರಿಂದ 7 ಅಡಿಗಳಷ್ಟು ಮನೆಗೆ ನುಗ್ಗಿದ ಕಾರಣ ಮನೆಗಳ ಗೋಡೆಗಳು ಜಖಂಗೊಂಡಿವೆ. ಅಲ್ಲದೆ ಮಂಡಿಯುದ್ದ ಕೆಸರು ತುಂಬಿದ್ದು, ಅದನ್ನು ಹೊರ ಹಾಕುವುದೇ ಸಾರ್ವಜನಿಕರಿಗೆ ಸವಾಲಾಗಿ ಪರಿಣಮಿಸಿದೆ. ಕೆಸರನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆದು ಅವರಿಗೆ ಊಟ ಹಾಗೂ ಬಟ್ಟೆ ವಿತರಣೆ ಮಾಡಲಾಗಿದೆ ಎಂದರು. ಹಾನಿಯ ಅಂದಾಜನ್ನು ಪರಿಶೀಲಿಸಿ, ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ಅಧಿಕಾರಿಗಳು ವಿವರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆದಷ್ಟು ಶೀಘ್ರ ವರದಿ ನೀಡುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ
ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಾಗೂ ಭಕ್ಷಿಕೆರೆ ಏರಿ ಒಡೆದ ಪರಿಣಾಮ ಉಂಟಾದ ಪ್ರವಾಹಕ್ಕೆ ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು. ಮನೆಯಲ್ಲಿದ್ದ ಆಹಾರ ಧಾನ್ಯ, ಉಡುಗೆ-ತೊಡುಗೆಗಳು, ಎಲೆಕ್ಟ್ರಿಕಲ್ ಉಪಕರಣಗಳು, ದಾಖಲೆಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಪರಿಕರಗಳೂ ಸೇರಿದಂತೆ ಎಲ್ಲಾ ಪದಾರ್ಥಗಳು ನೀರುಪಾಲಾಗಿವೆ.
2 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಬಟ್ಟೆಬರೆ
ಹಬ್ಬ ಹಾಗೂ ನೀರು ತುಂಬಿದ್ದ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಳು ಸ್ವಲ್ಪ ವಿಳಂಬವಾಗಿದ್ದವು. ಇದೀಗ ಅದಕ್ಕೆ ವೇಗ ದೊರೆತಿದ್ದು, ಇನ್ನೆರೆಡು ದಿನಗಳಲಿ ಕೆಸರು ಹೊರಹಾಕುವ ಕಾರ್ಯ ಪೂರ್ಣಗೊಳ್ಳಲಿದೆ. ಸಂತ್ರಸ್ತರಾಗಿರುವ ಸುಮಾರು 7 ವಾರ್ಡ್‌ನಲ್ಲಿ 2 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಬಟ್ಟೆಬರೆ ವಿತರಣೆ ಮಾಡಲಾಗುತ್ತಿದೆ. ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರಾಜ್ಯ ವಕ್ತಾರ ಬಿ.ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೊಹೇಲ್, ನಗರಸಭೆ ಸದಸ್ಯರಾದ ರಮೇಶ್, ಗೇಬ್ರಿಯಲ್, ಶಿವಸ್ವಾಮಿ, ಮುನಾಜಿಲ್ ಆಗಾ, ಮುಖಂಡರಾದ ಗೂಳಿಗೌಡ, ಸೊಹೇಲ್ ಖಾನ್, ಅತಾವುಲ್ಲಾ ಖಾನ್, ಅಕ್ಕಿ ಫೈರೋಜ್, ಮಾವಿನಸಸಿ ವೆಂಕಟೇಶ್, ಮೋಹನ್, ಚೇತನ್, ಕಿರಣ್, ಹನುಮಂತೇಗೌಡ, ಕುಮಾರ್, ಶೋಯೆಬ್, ರೈಡ್ ನಾಗರಾಜು ಮತ್ತಿತರರು ಇದ್ದರು.