ನವದೆಹಲಿ: ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 37 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಇದರೊಂದಿಗೆ, ಗುಜರಾತ್ ಚುನಾವಣೆಗೆ ಕಾಂಗ್ರೆಸ್ ಈವರೆಗೆ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.
ಕಾಂಗ್ರೆಸ್ ನ.4ರಂದು 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಬಳಿಕ ನ.11ರಂದು 46 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಬಯಡ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ಅವರ ಪುತ್ರ ಮಹೇಂದ್ರಸಿಂಹ ವಘೇಲಾಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಏತನ್ಮಧ್ಯೆ, ಪಾಲನ್‌ಪುರದಿಂದ ಮಹೇಶ್ ಪಟೇಲ್ ಹಾಗೂ ಮಹೇಶನಾದಿಂದ ಪಿ.ಕೆ. ಪಟೇಲ್ ಅವರನ್ನು ಕಣಕ್ಕಿಳಿಸಿದೆ.
ಅಂತಿಮ ಪಟ್ಟಿಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ನಾರಣಪುರ ಮತ್ತು ಗೋಧ್ರಾ ಕ್ಷೇತ್ರಗಳಿಂದ ಸೋನಾಲಿ ಬೆನ್ ಪಟೇಲ್ ಮತ್ತು ರಶ್ಮಿತಾಬೆನ್ ದುಷ್ಯಂತ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ.
ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.