ಕರ್ನಾಟಕದಲ್ಲಿ ಪಠಾಣ್ ಹಾಗೂ ಕ್ರಾಂತಿ 4 ದಿನಗಳಲ್ಲಿ ಗಳಿಸಿದ್ದಿಷ್ಟು
ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ನಮ್ಮದೇ ನೆಲದ ಕನ್ನಡ ಚಿತ್ರಗಳು ಹಾಗೂ ಪರಭಾಷಾ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ಏರ್ಪಟ್ಟಿದ್ದನ್ನು ಸಾಕಷ್ಟು ಬಾರಿ ಕಂಡಿದ್ದೇವೆ. ಕೆಲವೊಮ್ಮೆ ಕನ್ನಡ ಚಿತ್ರಗಳ ಅಬ್ಬರಕ್ಕೆ ಪರಭಾಷಾ ಚಿತ್ರಗಳು ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದರೆ, ಇನ್ನೂ ಕೆಲವು ಬಾರಿ ಪರಭಾಷಾ ಚಿತ್ರಗಳು ಕನ್ನಡ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡಿ ಥಿಯೇಟರ್ ಸಮಸ್ಯೆಯನ್ನು ಉಂಟುಮಾಡಿವೆ.
ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಕಂಟೆಂಟ್ ಚೆನ್ನಾಗಿರುವ ಯಾವುದೇ ಭಾಷೆಯ ಚಿತ್ರವಾದರೂ ಗೆಲ್ಲುತ್ತವೆ ಹಾಗೂ ಕಂಟೆಂಟ್ ಚೆನ್ನಾಗಿಲ್ಲದ ಪರಭಾಷಾ ಚಿತ್ರಗಳು ಸೋಲುಂಡು ಮಕಾಡೆ ಮಲುಗುವುದು, ಕಳಪೆ ವಿಮರ್ಶೆ ಪಡೆದುಕೊಂಡ ಕನ್ನಡದ ಸ್ಟಾರ್ ನಟರ ಚಿತ್ರಗಳು ಒಂದಷ್ಟು ಕಲೆಕ್ಷನ್ ಮಾಡಿ ಸಾಧಾರಣ ಹಿಟ್ ಎನಿಸಿಕೊಳ್ಳುವುದು ಸಹಜ.
ಸದ್ಯ ಕಳೆದ ವಾರ ಇದೇ ರೀತಿ ಕ್ರಾಂತಿ ಹಾಗೂ ಪಠಾಣ್ ಕೂಡ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿಗೆ ಬಿದ್ದಿವೆ. ಕಳೆದ ವರ್ಷ ಬಾಯ್‌ಕಾಟ್ ಅಭಿಯಾನಕ್ಕೆ ಸಿಲುಕಿ ಮಂಕಾಗಿದ್ದ ಬಾಲಿವುಡ್‌ಗೆ ಶಾರುಖ್ ಖಾನ್ ನಟನೆಯ ಈ ಚಿತ್ರ ಮರುಜೀವ ನೀಡಿದೆ. ಮೊದಲಿಗೆ ಜನವರಿ 25ರಂದು ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಬಿಡುಗಡೆಗೊಂಡರೆ, ಮಾರನೇ ದಿನ ಜನವರಿ 26ರಂದು ದರ್ಶನ್ ನಟನೆಯ ಕ್ರಾಂತಿ ಚಿತ್ರ ಬಿಡುಗಡೆಗೊಂಡಿತು. ಇನ್ನು ಎರಡೂ ಚಿತ್ರಗಳೂ ಸಹ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಆರಂಭವನ್ನು ಪಡೆದುಕೊಂಡಿದ್ದು, ಚೆನ್ನಾಗಿಯೇ ಕಲೆಕ್ಷನ್ ಮಾಡಿವೆ. ಅದರಲ್ಲೂ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಈ ಎರಡೂ ಚಿತ್ರಗಳೂ ಪೈಪೋಟಿಗೆ ಬಿದ್ದಂತೆ ಕಲೆಕ್ಷನ್ ಮಾಡಿವೆ.
ಕ್ರಾಂತಿ vs ಪಠಾಣ್: ಕರ್ನಾಟಕದಲ್ಲಿ ಮೊದಲ 4 ದಿನದ ಕಲೆಕ್ಷನ್
ಈ ಎರಡೂ ಚಿತ್ರಗಳು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿವೆ ಎಂಬುದರ ಬಗ್ಗೆ ಚಿತ್ರತಂಡಗಳೇನೂ ಅಧಿಕೃತ ಮಾಹಿತಿಯನ್ನು ಬಿಚ್ಚಿಟ್ಟಿಲ್ಲ. ಆದರೆ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಈ ಕುರಿತಾಗಿ ಮಾಹಿತಿ ನೀಡಿದ್ದು, ಕ್ರಾಂತಿ ಚಿತ್ರ ಮೊದಲ 4 ದಿನಗಳಲ್ಲಿ ಒಟ್ಟು 25.75 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಪಠಾಣ್ ಕರ್ನಾಟಕದಲ್ಲಿ ಮೊಲದ 4 ದಿನಗಳಲ್ಲಿ 20 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಮೊದಲ 4 ದಿನಗಳ ಗಳಿಕೆ ಪೈಕಿ ಎರಡೂ ಚಿತ್ರಗಳ ನಡುವೆ ಕೇವಲ ಐದು ಕೋಟಿಯಷ್ಟೇ ವ್ಯತ್ಯಾಸವಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರು ನೀಡಿರುವ ಮಾಹಿತಿ.
ನಾಲ್ಕು ದಿನಗಳಲ್ಲಿ ಯಾವ ದಿನ ಎಷ್ಟು ಗಳಿಸಿತು ಕ್ರಾಂತಿ?
ಮೊದಲ ದಿನ 12.85 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿ ಅಬ್ಬರದ ಓಪನಿಂಗ್ ಪಡೆದುಕೊಂಡಿದ್ದ ಕ್ರಾಂತಿ ಎರಡನೇ ದಿನ 3.9 ಕೋಟಿ ಹಾಗೂ ಮೂರನೇ ದಿನ 4.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ನಾಲ್ಕನೇ ದಿನವಾದ ಜನವರಿ 29ರ ಭಾನುವಾರದಂದು ಕ್ರಾಂತಿ ಚಿತ್ರ 4.65 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ. ಈ ಮೂಲಕ ಕ್ರಾಂತಿ ಮೊದಲ ವಾರಾಂತ್ಯಕ್ಕೆ 25.75 ಕೋಟಿ ಗಳಿಸಿದೆ ಎಂಬ ಮಾಹಿತಿ ಇದೆ.
ಬುಕಿಂಗ್‌ನಲ್ಲಿ ಕ್ರಾಂತಿ ಹಿಂದಿಕ್ಕಿದ ಪಠಾಣ್
ಇನ್ನು ಬೆಂಗಳೂರು ಹಾಗೂ ಮಂಗಳೂರು ಶೋಗಳ ಸಂಖ್ಯೆಯಲ್ಲಿ ಕ್ರಾಂತಿ ಚಿತ್ರವನ್ನು ಪಠಾಣ್ ಹಿಂದಿಕ್ಕಿದೆ. ಬೆಂಗಳೂರಿನಲ್ಲಿ ಪಠಾಣ್ ದಿನವೊಂದಕ್ಕೆ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಕ್ರಾಂತಿ 400ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ. ಇಂದು ( ಜನವರಿ 30 ) ಬೆಂಗಳೂರಿನಲ್ಲಿ ಪಠಾಣ್ 561 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಕ್ರಾಂತಿ 487 ಪ್ರದರ್ಶನಗಳನ್ನು ಪಡೆದುಕೊಂಡಿದೆ.