Good News : ದೇಶದ ಜನತೆಗೆ ಗುಡ್ ನ್ಯೂಸ್ ; ಖಾದ್ಯ ತೈಲ ಬೆಲೆ 8-12 ರೂಪಾಯಿ ಇಳಿಕೆ, ತಕ್ಷಣದಿಂದಲೇ ಜಾರಿ

ನವದೆಹಲಿ : ಕಳೆದ ಎರಡು ತಿಂಗಳಲ್ಲಿ ಅಂತರರಾಷ್ಟ್ರೀಯ ದರಗಳು ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಅಗತ್ಯ ಸರಕುಗಳ ಚಿಲ್ಲರೆ ಬೆಲೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ 8 ರಿಂದ 12 ರೂಪಾಯಿವರೆಗೆ ಇಳಿಸುವಂತೆ ಖಾದ್ಯ ತೈಲ ಉದ್ಯಮಕ್ಕೆ ಸರ್ಕಾರ ಶುಕ್ರವಾರ ನಿರ್ದೇಶನ ನೀಡಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಸಭೆಯಲ್ಲಿ ಖಾದ್ಯ ತೈಲ ಸಂಘಗಳ ಪ್ರತಿನಿಧಿಗಳಿಗೆ ಈ ನಿರ್ದೇಶನವನ್ನ ನೀಡಿದರು. ಇನ್ನು ಕಡಿಮೆ ಖಾದ್ಯ ತೈಲ ಬೆಲೆಗಳ ಪ್ರಯೋಜನಗಳನ್ನ ಗ್ರಾಹಕರಿಗೆ ವರ್ಗಾಯಿಸಲು ನಿರ್ದಿಷ್ಟವಾಗಿ ತಿಳಿಸಲಾಯಿತು. ಯಾಕಂದ್ರೆ, ಕಳೆದ ಎರಡು ತಿಂಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್ಗೆ 150-200 ಡಾಲರ್ಗಳಷ್ಟು ಕುಸಿದಿವೆ ಎಂದು ಉದ್ಯಮವು ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಮುಂದಿನ ಕೆಲವು ದಿನಗಳಲ್ಲಿ ಖಾದ್ಯ ತೈಲ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕಡಿಮೆ ಬೆಲೆಯ ಲಾಭವನ್ನ ತ್ವರಿತವಾಗಿ ಗ್ರಾಹಕರಿಗೆ ವರ್ಗಾಯಿಸುವಂತೆ ಚೋಪ್ರಾ ಖಾದ್ಯ ತೈಲ ಉತ್ಪಾದಕರಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಯಾರಕರು ಮತ್ತು ಸಂಸ್ಕರಣಾಗಾರಗಳು ವಿತರಕರಿಗೆ ನೀಡುವ ಬೆಲೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ಕಡಿಮೆ ಮಾಡಬೇಕಾಗಿದೆ ಎಂದು ಉದ್ಯಮಕ್ಕೆ ತಿಳಿಸಲಾಗಿದೆ.