ಜುಲೈ1ರಿಂದ ಗೃಹಜ್ಯೋತಿ ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ತೀರ್ಮಾನಿಸಿದೆ.
ಜುಲೈ1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೀತು. ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಂ.1 ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಯಾವುದೇ ಧರ್ಮ, ಜಾತಿಗಳನ್ನ ನೋಡದೇ ನಾವು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು.
ಚುನಾವಣೆಯಲ್ಲಿ ನಾವು ಕೊಟ್ಟ ನಂ.1 ಗ್ಯಾರಂಟಿ ಅಂದ್ರೆ ಗೃಹಜ್ಯೋತಿ ಯೋಜನೆ. ಮೊದಲು ಕೊಟ್ಟ ವಾಗ್ದಾನವನ್ನೇ ನಾವು ಮೊದಲು ಈಡೇರಿಸುತ್ತೇವೆ. 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಕೊಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 12 ತಿಂಗಳಲ್ಲಿ ವಿದ್ಯುತ್ ಬಳಕೆ ಮಾಡಿರುವ ಸರಾಸರಿ ತೆಗೆದುಕೊಳ್ತೇವೆ. ಒಂದು ವರ್ಷದಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯಲ್ಲಿ 200 ಯೂನಿಟ್‌ಗಿಂತ ಕಡಿಮೆ ಇದ್ದವರು ಗೃಹಜ್ಯೋತಿ ಫಲಾನುಭವಿಗಳಾಗಲಿದ್ದಾರೆ.
ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಕರೆಂಟ್ ಬಿಲ್ ಕಟ್ಟುವಂತಿಲ್ಲ. ಜುಲೈ 1ರಿಂದ ವಿದ್ಯುತ್ ಬಳಸುವವರು ಆಗಸ್ಟ್ ತಿಂಗಳಿಗೆ ಕರೆಂಟ್ ಬಿಲ್ ಕಟ್ಟಬೇಕಿಲ್ಲ. ಆದರೆ ಬಿಲ್ ಬಾಕಿ ಉಳಿಸಿಕೊಂಡವರು ಅವರೇ ಬಾಕಿ ಬಿಲ್ ಕಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.