
ಒಡಿಶಾದ ಭೀಕರ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥವಾಗಿರು ಮಕ್ಕಳಿಗೆ ಗುರುಗ್ರಾಮದ ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
“ಈ ದುಃಖದ ಸಮಯದಲ್ಲಿ, ಈ ದುರಂತ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವುದು ನಾನು ಮಾಡಬಹುದಾದ ಕನಿಷ್ಠ ಸಹಾಯವಾಗಿದೆ.
ಅಂತಹ ಮಕ್ಕಳಿಗೆ ಸೆಹ್ವಾಗ್ ಇಂಟರ್ನ್ಯಾಷನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ನಾನು ಉಚಿತ ಶಿಕ್ಷಣವನ್ನು ನೀಡುತ್ತೇನೆ” ಎಂದು ಸೆಹ್ವಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಶಕಗಳಲ್ಲಿ ದೇಶದ ಅತ್ಯಂತ ಭೀಕರ ರೈಲು ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಾಲಾ ಶಿಕ್ಷಣವನ್ನು ನೀಡುವುದಾಗಿ ಅದಾನಿ ಗ್ರೂಪ್ ಕೂಡ ಘೋಷಣೆ ಮಾಡಿತ್ತು, ಅದಾದ ನಂತರ ಸೆಹ್ವಾಗ್ ಕೂಡ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿದ್ದಾರೆ.
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ನಾವೆಲ್ಲರೂ ತೀವ್ರವಾಗಿ ವಿಚಲಿತರಾಗಿದ್ದೇವೆ. ಈ ಅಪಘಾತದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಅಮಾಯಕರ ಶಾಲಾ ಶಿಕ್ಷಣವನ್ನು ಅದಾನಿ ಗ್ರೂಪ್ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಬೆಂಬಲಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳು ಮತ್ತು ಮಕ್ಕಳಿಗೆ ಉತ್ತಮ ನಾಳೆಯನ್ನು ನೀಡಿ ಎಂದು ಗೌತಮ್ ಅದಾನಿ ಟ್ವೀಟ್ ಮಾಡಿದ್ದರು.
280ಕ್ಕೂ ಅಧಿಕ ಮಂದಿ ಸಾವು
ಮೂರು ರೈಲುಗಳು- ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಮತ್ತು ಗೂಡ್ಸ್ ರೈಲು – ಶುಕ್ರವಾರ ಅಪಘಾತಕ್ಕೀಡಾಗಿದ್ದು, ಇದು ಭಾರತದ ಅತ್ಯಂತ ಕೆಟ್ಟ ರೈಲು ಅಪಘಾತಗಳಲ್ಲಿ ಒಂದಾಗಿದೆ ಎಂದು ಕರೆಯಲಾಗಿದೆ.
ಈ ದುರ್ಘಟನೆಯಲ್ಲಿ 280ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಹಾರ ಕೆಲಸದಲ್ಲಿ ನಿರತರಾಗಿದ್ದಾರೆ.
ರೈಲು ಬೋಗಿಗಳನ್ನು ತೆರವು ಮಾಡಾಲಾಗಿದ್ದು, ಒಂದು ಮಾರ್ಗದಲ್ಲಿ ಎಲೆಕ್ಟ್ರಿಕ್ ಕೆಲಸ ಪೂರ್ತಿಯಾಗಿದ್ದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
ಕಳೆದ 30 ವರ್ಷದಲ್ಲಿ ಇದು ಅತ್ಯಂತ ಕೆಟ್ಟ ರೈಲು ದುರಂತ ಎಂದು ಪರಿಗಣಿಸಲಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ರೈಲು ದುರಂತಕ್ಕೆ ದೇಶ ವಿದೇಶಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.