ಬೆಳಗಾವಿ: 500ರ ನಕಲಿ ನೋಟು ನೀಡಿ ಲಕ್ಷಾಂತರ ರೂಪಾಯಿ ವಂಚನೆ!

2 ಸಾವಿರ ನೋಟು ಬ್ಯಾನ್ ಮಾಡಲಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಂದಿ ನಕಲಿ ನೋಟು ನೀಡಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣಾ ವ್ಯಾಪ್ತಿಯಲ್ಲಿ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರನ್ನು ಬಂಧಿಸಲಾಗಿದೆ.ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಕೆಲ ಖದೀಮರು ಮಹಾರಾಷ್ಟ್ರ ಮೂಲದ ಸಮೀರ್ ಭೋಸಲೇ ಎಂಬುವವರಿಗೆ ಆಮೀಷವೊಡ್ಡಿ ಐದು ಲಕ್ಷ ಪಂಗನಾಮ ಹಾಕಿದ್ದಾರೆ. ನೀವು 500 ಮುಖಬೆಲೆಯ 5 ಲಕ್ಷ ನೀಡಿದರೆ ನಾವು 6 ಲಕ್ಷ 2 ಸಾವಿರ ಮುಖಬೆಲೆಯ ನೋಟು ನೀಡುತ್ತೇವೆ. ನಮಗೆ ಬ್ಯಾಂಕ್ನಲ್ಲಿ ಹಣ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನಂಬಿಸಿದ್ದಾರೆ.
ಒಂದು ಲಕ್ಷ ಹಣ ಹೆಚ್ಚಿಗೆ ಸಿಗುತ್ತೆ ಎಂದು ನಂಬಿದ ಸಮೀರ್ 5 ಲಕ್ಷ ನೀಡಿ 6 ಲಕ್ಷ ಪಡೆದಿದ್ದಾರೆ. ಬಳಿಕ ಪೋಲಿಸರು ಬಂದರು ಎಂದು ಹೇಳಿ ಕೂಡಲೇ ಎಸ್ಕೇಪ್ ಆಗಿದ್ದಾರೆ. ಬಳಿಕ ಹಣವನ್ನು ಚೆಕ್ ಮಾಡಿದಾಗ ನಕಲಿ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಲಾಗಿದ್ದು, ವಿಷಯ ತಿಳಿದ ಕಾಗವಾಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದಾರೆ.
ಆರೋಪಿಗಳಲ್ಲಿ ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣೆಯ ಸಿಬ್ಬಂದಿಯೂ ಸೇರಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.