ಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಸದಾಶಿವ ನಗರದ ನಿವಾಸಿ ಪ್ರಸಾದ ಚೌಗುಲೆ

ಬೆಳಗಾವಿ: ಕುಂದಾನಗರಿಯಲ್ಲಿ ಬೈಕ್ ಸವಾರನೊಬ್ಬ ಸಂಚಾರ ದಟ್ಟಣೆ ವೇಳೆ ತಾವೇ ಸ್ವತಃ ಸಂಚಾರ ನಿರ್ವಹಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು.. ನಗರದ ಕಪಿಲೇಶ್ವರ ಮೇಲ್ಸೇತುವೆ ಬಳಿಯ ಶನಿಮಂದಿರ ಕ್ರಾಸ್ನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದೇ ರಸ್ತೆಯ ಮೂಲಕ ಬೈಕ್ನಲ್ಲಿ ಸದಾಶಿವ ನಗರದ ನಿವಾಸಿ ಪ್ರಸಾದ ಚೌಗುಲೆ ಎಂಬುವವರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಭಾರಿ ಸಂಚಾರ ದಟ್ಟಣೆಯಾಗಿದ್ದನ್ನು ಗಮನಿಸಿದ್ದಾರೆ. ಬಳಿಕ ತಮ್ಮ ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ, ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯ ನಿಂತುಕೊಂಡು ಸಂಚಾರ ನಿರ್ವಹಣೆ ಮಾಡಿದ್ದಾರೆ.
ಪ್ರಸಾದ ಚೌಗುಲೆ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಪೊಲೀಸರಂತೆ ಕೆಲಸ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದು, ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಂತರ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪ್ರಸಾದ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.