ವಿದ್ಯುತ್ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರ

ಬೆಂಗಳೂರು, ಜೂನ್ 11: ಒಂದು ಕಡೆ ರಾಜ್ಯದಲ್ಲಿ ಉಚಿತ ವಿದ್ಯುತ್ ಪಡೆಯುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಇನ್ನೊಂದು ಕಡೆ ಜೂನ್ ತಿಂಗಳಿನಲ್ಲಿ ಬಂದ ವಿದ್ಯುತ್ ಬಿಲ್ ಜನರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಉಚಿತ ವಿದ್ಯುತ್ ಕೊಡಲು ನಮ್ಮ ಮೇಲೆ ಹೊರೆ ಹಾಕಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ 300 ರುಪಾಯಿ ವಿದ್ಯುತ್ ಬಿಲ್ ಕಟ್ಟಿದ್ದವರಿಗೆ ಈ ಬಾರಿ 900 ರೂಪಾಯಿ ಆಸುಪಾಸಿನಲ್ಲಿ ವಿದ್ಯುತ್ ಬಿಲ್ ಬಂದಿದೆ. ವಿದ್ಯುತ್ ದರದಲ್ಲಿ ಭಾರಿ ಏರಿಕೆಯಾಗಿದೆ. ಕನಿಷ್ಠ ಶುಲ್ಕವನ್ನು 125 ರುಪಾಯಿಗಳಿಂದ ಏಕಾಏಕಿ 200 ರುಪಾಯಿಗೆ ಏರಿಕೆ ಮಾಡಿದ್ದಾರೆ ಎಂದು ನಾಗರೀಕರು ಅಸಮಾಧಾನ ಹೊರಹಾಕಿದ್ದಾರೆ.
ವಿರೋಧ ಪಕ್ಷವಾದ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಉಚಿತ ಕೊಡುಗೆಗಳ ವೆಚ್ಚವನ್ನು ಸರಿಹೊಂದಿಸಲು ಕಾಂಗ್ರೆಸ್ ಬೆಲೆ ಏರಿಕೆ ಮಾಡಿದೆ ಎಂದು ಬಿಜೆಪಿ ಆರೋಪ ಮಾಡಿದೆ. ರಾಜ್ಯದ ಜನತೆಗೆ ಇನ್ನೂ ಬೆಲೆ ಏರಿಕೆ ಬಿಸಿ ಕಾದಿದೆ ಎಂದು ಬಿಜೆಪಿ ಕಾಂಗ್ರೆಸ್‌ನ ಉಚಿತ ಕೊಡುಗೆಗಳನ್ನು ಛೇಡಿಸಿದೆ.
ವಿದ್ಯುತ್ ದರ ಏರಿಕೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ
ವಿದ್ಯುತ್ ದರ ಏರಿಕೆ ಬಗ್ಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ವಿದ್ಯುತ್ ದರ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರ ಎಂದು ಅವರು ಹೇಳಿದರು.
ವಿದ್ಯುತ್ ದರ ಹೆಚ್ಚಳ ಮಾಡುವ ಬಗ್ಗೆ ಏಪ್ರಿಲ್ 1ರಂದೇ ತೀರ್ಮಾನ ಆಗಿತ್ತು, ನಾವು ಅಧಿಕಾರಕ್ಕೆ ಬರುವ ಮುನ್ನವೇ ವಿದ್ಯುತ್ ದರ ಏರಿಕೆಯಾಗಿತ್ತು, ಈ ತಿಂಗಳು ಬಿಲ್‌ನಲ್ಲಿ ಅದು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೇ 12ರಿಂದ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಏಪ್ರಿಲ್‌ನಲ್ಲೇ ತೀರ್ಮಾನ ಆಗಿತ್ತು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವಿರೋಧ ಪಕ್ಷಗಳಿಗೆ ಭಯ ಮೂಡಿಸಿವೆ. ಅದಕ್ಕಾಗಿಯೇ ಅವರು ಹಲವು ಟೀಕೆಗಳನ್ನು ಮಾಡುತ್ತಿದ್ದಾರೆ. ವಿರೋಧಿಗಳು ಟೀಕೆ ಮಾಡಿಕೊಂಡರು ಅಲ್ಲಿಯೇ ಇರಲಿ, ನಮ್ಮ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಜುಲೈ 1ರಿಂದ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆ ಜಾರಿಯಾಗುತ್ತೆ, 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಬಿಲ್ ಬರಲ್ಲ, ಬಿಜೆಪಿಯವರು ಗೊಂದಲ ಮೂಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಬಿಲ್ ಹೆಚ್ಚಳಕ್ಕೆ ಇಲ್ಲಿದೆ ಕಾರಣ8
ಕೆಇಆರ್ಸಿ ಏಪ್ರಿಲ್ ತಿಂಗಳಿನಲ್ಲೇ ವಿದ್ಯುತ್ ದರ ಹೆಚ್ಚಳ ಮಾಡಿತ್ತು, ಪ್ರತೀ ಯುನಿಟ್‌ಗೆ 70 ಪೈಸೆ ಹೆಚ್ಚಿಸಿತ್ತು. ಚುನಾವಣೆ ಹಿನ್ನಲೆಯಿಲ್ಲಿ ಬಿಜೆಪಿ ಸರ್ಕಾರ ದರ ಹೆಚ್ಚಿಸಲು ತಾತ್ಕಾಲಿಕ ತಡೆ ನೀಡಿತ್ತು, ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಇಆರ್ಸಿ ದರ ಏರಿಕೆ ಜಾರಿಮಾಡಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಿಂದ ದರ ಏರಿಕೆ ಅನ್ವಯವಾಗಿದ್ದು, ಇದರಿಂದ ಏಪ್ರಿಲ್ ಮತ್ತು ಜೂನ್‌ನಲ್ಲಿ ಬಳಸಿದ ವಿದ್ಯುತ್‌ನ ಪ್ರತೀ ಯುನಿಟ್‌ಗೆ 70 ಪೈಸೆಯಂತೆ ಈ ಜೂನ್ ತಿಂಗಳಿನಲ್ಲಿ ವಸೂಲಿ ಮಾಡುತ್ತಿರುವುದರಿಂದ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ.