ನಗರದ ವಿವಿಧೆಡೆ ಸಂಜೆ ತಂಪೆರೆದ ವರುಣ, ಇನ್ನೂ 03 ದಿನ ಮಳೆ

ಬೆಂಗಳೂರು, ಜೂನ್ 11: ಬೆಂಗಳೂರು ನಗರದಲ್ಲಿ ಎಂದಿನಂತೆ ಭಾನುವಾರ ಸಂಜೆ ಮತ್ತೆ ಮಳೆ ಆರಂಭವಾಗಿದೆ. ಎಲ್ಲೆಲ್ಲೂ ಮೋಡ ಕವಿದ ವಾತಾವರಣವೇ ಕಂಡು ಬಂದಿದ್ದು, ಪಶ್ಚಿಮ ವಲಯ ವ್ಯಾಪ್ತಿಯ ಬಡಾವಣೆಗಳಲ್ಲಿ ಅಧಿಕ ಮಳೆ ದಾಖಲಾಗಿದೆ. ಇಂದು ತಡರಾತ್ರಿವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿಯುವ ಲಕ್ಷಣಗಳು ಇವೆ.
ಇಂದು ಮಧ್ಯಾಹ್ನ ನಂತರ ಚದುರಿದಂತೆ ನಗರದಲ್ಲಿ ಅಲ್ಲಲ್ಲಿ ಮಳೆ ಶುರುವಾಯಿತಾದರೂ ಬಳಿಕ ಕಡಿಮೆಯಾಯಿತು. ಮತ್ತೆ ಬಿಸಿಲಿನ ದರ್ಶನವಾಯಿತು. ಸಂಜೆಯಾಗುತ್ತಿದ್ದಂತೆ ಮಬ್ಬು ವಾತಾವರಣ ಸೃಷ್ಟಿಯಾಗಿ ಕೆಲ ಕಾಲ ತುಂತುರು ಮಳೆ ಆರಂಭವಾಗಿದೆ.
ಬಿಬಿಎಂಪಿ ಪಶ್ಚಿಮ ವಲಯದ ಪ್ರದೇಶಗಳಾದ ಅರಮನೆ ನಗರದಲ್ಲಿ 5.5 ಮಿಲಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ಬಸವನಪುರ, ಗಂಗಾನಗರ, ಲಗ್ಗೇರಿ, ರಾಜರಾಜೇಶ್ವರಿ ನಗರ, ದೇವರ ಜೀವನಹಳ್ಳಿ, ಬಸವನಗುಡಿ, ಪುಲಕೇಶಿ ನಗರ, ಶಂಕರಮಠ, ಮಲ್ಲೇಶ್ವರಂ, ವಿಜಯನಗರ, ನಾಯಂಡಹಳ್ಳಿ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಯಲಹಂಕ, ಹೆಬ್ಬಾಳ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತುಂತುರು ಮತ್ತು ಕೆಲವೊಮ್ಮೆ ಹಗುರ ಮಳೆ ಸಹ ಬಿದ್ದಿದೆ.
ಇನ್ನೂ ನಗರದ ಯಶವಂತಪುರ, ಗೊರಗುಂಟೆ ಪಾಳ್ಯ, ವಿದ್ಯಾರಣ್ಯಪುರ ಸೇರಿದಂತೆ ಈ ಭಾಗದ ಕೆಲವು ಕಡೆಗಳಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆ ಬಿದ್ದಿದೆ. ಈ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತ ದೃಶ್ಯ ಸಾಮಾನ್ಯವಾಗಿತ್ತು.
ಆಗಾಗ ಬಂದು ಹೋಗುತ್ತಿದ್ದ ಈ ಮಳೆಯಿಂದಾಗಿ ವಾರದ ರಜೆಯಲ್ಲಿದ್ದು, ಹೊರಗೆ ಹೋಗಲು, ಸುತ್ತಾಡಲು ಶಾಪಿಂಗ್ ಮಾಡಲು ಪ್ಲಾನ್ ಮಾಡಿದ್ದವರಿಗೆ ಕಿರಿ ಕಿರಿ ಉಂಟು ಮಾಡಿತು. ಅಲ್ಲದೇ ರಸ್ತೆ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳ ವ್ಯಾಪಾರಕ್ಕೂ ತೊಂದರೆ ಮಾಡಿತು. ಸದ್ಯ ಈಗಲೂ ಮೋಡ ಮುಸುಕಿನ ವಾತಾವರಣ ಇದ್ದು, ಮತ್ತೆ ರಾತ್ರಿಯಿಂದ ಬೆಳಗ್ಗೆವರೆಗೆ ಮಳೆ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂಗಾರು ಮಳೆಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಆದರೆ ಈ ಚಂಡಮಾರುತವು ಗುಜರಾತ್, ಸೌರಾಷ್ಟ್ರ ದತ್ತ ಸಾಗಿದೆ. ಇಂದು ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಜೂನ್ 15 ರವರೆಗೂ ಇದು ಸಕ್ರಿಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 14ರವರೆಗೆ ಬೆಂಗಳೂರಿಗೆ ಮಳೆ
ಈ ಕಾರಣಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆಗಾಗ ಬಂದು ಹೋಗುತ್ತಿದೆ. ಬೆಂಗಳೂರಿಗೆ ಜೂನ್ 14ರವರೆಗೆ ಜೋರು ಮಳೆ ಬರುವ ಸಾಧ್ಯತೆ ಇದೆ. ನಿತ್ಯವು ಸಂಜೆ ನಂತರ ಮಳೆರಾಯನ ದರ್ಶನವಾಗಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬಂದರೂ, ಇನ್ನು ಕೆಲವು ಬಡಾವಣೆಗಳಲ್ಲಿ ಒಂದೇ ಸಮನೆ ಜಿಟಿ ಜಿಟಿ ರೂಪದಲ್ಲಿ ಸುರಿಯಲಿದೆ.
ಮುಂದಿನ ಮೂರು ದಿನ ನಗರದಲ್ಲಿ ಹೀಗೆ ತಂಪು ವಾತಾವರಣ ಜೊತೆಗೆ ಆಗಾಗ ಬಿಸಿಲು ಕಂಡು ಬರಲಿದೆ. ಈ ಅವಧಿಯಲ್ಲಿ ತಾಪಮಾನ ತುಸು ಇಳಿಕೆ ಆಗಿರಲಿದ್ದು, ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನಾ ವರದಿ ತಿಳಿಸಿದೆ.