
ಭೋಪಾಲ್: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳೆ ಜನರಿಗೆ ಕಾಂಗ್ರೆಸ್ ಐದು ಗ್ಯಾರಂಟಿ (Congress Guarantee) ಘೋಷಣೆ ಮಾಡಿ, ಅಧಿಕಾರಕ್ಕೆ ಬಂದು, ಅವುಗಳನ್ನು ಜಾರಿಗೊಳಿಸಿದ ಯಶಸ್ಸಿನ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿ ಘೋಷಣೆ ಮಾಡಿದೆ.
ಆ ಮೂಲಕ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕರ್ನಾಟಕದಲ್ಲಿ ಅನುಸರಿಸಿದ ತಂತ್ರವನ್ನೇ ಅನುಸರಿಸಲು ಮುಂದಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಬಲ್ಪುದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಚುನಾವಣೆ ರ‍್ಯಾಲಿ ನಡೆಸಿದರು. ಇದೇ ವೇಳೆ ಅವರು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ಐದು ಗ್ಯಾರಂಟಿಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸಿನ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ಇದೇ ರೀತಿ ಗ್ಯಾರಂಟಿ ಘೋಷಿಸಿದ್ದು, ಗ್ಯಾರಂಟಿಗಳು ಕಾಂಗ್ರೆಸ್‌ಗೆ ಚುನಾವಣೆ ವೇಳೆ ಭಾರಿ ಅಸ್ತ್ರಗಳಾಗುತ್ತಿವೆ.
मध्य प्रदेश की पावन धरा पर कांग्रेस महासचिव @priyankagandhi जी का आत्मीय अभिनंदन।
यहां वे विशाल जनसभा को संबोधित करेंगी। मध्य प्रदेश के सुनहरे कल के लिए हम सभी संकल्पित हैं। #विजय_शंखनाद_मध्यप्रदेश pic.twitter.com/CYdU1mY7S1
— Congress (@INCIndia) June 12, 2023
- ಗೃಹಿಣಿಯರಿಗೆ ಮಾಸಿಕ 1,500 ರೂಪಾಯಿ ಸಹಾಯಧನ
- ಪ್ರತಿಯೊಂದು ಮನೆಗೆ 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
- 100 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ
- ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುವುದು
- ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದು
ಕರ್ನಾಟಕದ ಉದಾಹರಣೆ ಕೊಟ್ಟ ಪ್ರಿಯಾಂಕಾ ಗಾಂಧಿ
ಜಬಲ್ಪುರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿಜೆಪಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ. ಆದರೆ, ಕಾಂಗ್ರೆಸ್ ಮಾತ್ರ ನುಡಿದಂತೆ ನಡೆಯುತ್ತದೆ. ನಾವು ನರ್ಮದಾ ನದಿ ತೀರಕ್ಕೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ. ಕರ್ನಾಟಕದಲ್ಲಿ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ’ ಎಂದು ಹೇಳಿದರು. ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜನರಿಗೆ ಉಚಿತ ಯೋಜನೆಗಳನ್ನು ನೀಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ತಂತ್ರ ರೂಪಿಸಿದ್ದಾರೆ.