ಮಹಿಳೆಯರ ‘ಉಚಿತ ಪ್ರಯಾಣ’ಕ್ಕೆ ಇನ್ಮುಂದೆ ‘ಒರಿಜಿನಲ್ ಐಡಿ’ ಬೇಕಿಲ್ಲ -KSRTC ಆದೇಶ

ಬೆಂಗಳೂರು: ಶಕ್ತಿ ಯೋಜನೆಯ ( Shakti Scheme ) ಅಡಿಯಲ್ಲಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಒರಿಜಿನಲ್ ಐಡಿ ಕಾರ್ಡ್ ( Original ID ) ಏನೂ ಬೇಕಿಲ್ಲ. ನಕಲು ಪ್ರತಿ ಇದ್ದರೂ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂಬುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾರ್ಪಾಡು ಆದೇಶದಲ್ಲಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State Road Transport Corporation – KSRTC ) ಮುಖ್ಯ ಸಂಚಾರ ವ್ಯವಸ್ಥಾಪಕರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರಿಗೆ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸಂಬಂಧ ಶಕ್ತಿ ಯೋಜನೆಯ ಅಡಿಯಲ್ಲಿ ನಿರ್ದೇಶನ ನೀಡಲಾಗಿತ್ತು ಎಂದಿದ್ದಾರೆ.
ಸಾಮಾನ್ಯ ಸ್ಥಾಯಿ ಆದೇಶದಲ್ಲಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳಲ್ಲಿ ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ ಮುಖಾಂತರ ಹಾಜರುಪಡಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿತ್ತು ಎಂದಿದ್ದಾರೆ.
ಈ ನಡುವೆ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಆ ಆದೇಶದಲ್ಲಿ ನಮೂದಿಸಿರುವ ಗುರುತಿನ ಚೀಟಿಗಳ ನಕಲು ಪ್ರತಿಯನ್ನು ಸಹ ಮಾನ್ಯ ಮಾಡಲು ನಿರ್ಧರಿಸಿದೆ. ಆದುದರಿಂದ ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಗಳ ಮೂಲ, ನಕಲು, ಡಿಜಿಲಾಕರ್ ( ಹಾರ್ಡ್ ಮತ್ತು ಸಾಫ್ಟ್ ಕಾಪಿ ) ಮಾದರಿಯಲ್ಲಿ ಹಾಜರುಪಡಿಸಿ ಪ್ರಯಾಣಿಸಲು ಅನುಮತಿಸಿ ಆದೇಶಿಸಿದ್ದಾರೆ. ಈ ಮೂಲಕ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.