ಕೌಟುಂಬಿಕ ಕಲಹದಿಂದ ಗಾಯಗೊಂಡಿದ್ದ ಅತ್ತೆ ಸಾವು.. ಸೊಸೆ ವಿರುದ್ಧ ಕೊಲೆ ಕೇಸ್ ದಾಖಲು

ಬೆಳಗಾವಿ : ಕೌಟುಂಬಿಕ ಕಲಹದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಈ ಮಹಿಳೆಯ ಸಾವಿಗೆ ಸೊಸೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸ್ವತಃ ಮೃತ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಬೈಲಹೊಂಗಲ ಪಟ್ಟಣದ ಮಹೆಬೂಬಿ ಯಾಕೂಶಿ (53) ಎಂಬವರು ನಿನ್ನೆ(ಮಂಗಳವಾರ) ಮೃತಪಟ್ಟಿದ್ದರು. ಈ ಸಂಬಂಧ ಸೊಸೆ ಮೆಹರೂನಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸುಬಾನ್ ಯಾಕೂಶಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಬಾನ್ ಮತ್ತು ಮೆಹರೂನಿ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಮೆಹರೂನಿ ಸುಬಾನ್ಗೆ ಬೇರೆ ಮನೆ ಮಾಡುವಂತೆ ಪೀಡಿಸುತ್ತಿದ್ದರಂತೆ. ಬೇರೆ ಮನೆ ಮಾಡಲು ನಿರಾಕರಿಸಿದ್ದಕ್ಕೆ ಮೆಹರೂನಿ ತನ್ನ ತವರು ಮನೆಯವರನ್ನು ಕರೆಸಿ ಪತಿ ಮತ್ತು ಅತ್ತೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅತ್ತೆ ಗಾಯಗೊಂಡಿದ್ದರು ಎಂದು ಹೇಳಲಾಗಿದೆ.
ಗಾಯಗೊಂಡಿದ್ದ ಮಹೆಬೂಬಿಯನ್ನು ಮೇ 22ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜೂನ್ 1ರಂದು ಮಹೆಬೂಬಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ನಂತರ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಮಹೆಬೂಬಿ ನಿನ್ನೆ ಕೊನೆಯುಸಿರೆಳೆದಿದ್ದು, ಲೋ ಬಿಪಿ ಇಲ್ಲವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದೆಡೆ ಸೊಸೆ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ದೂರು ದಾಖಲಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಕೊಲೆ ರಹಸ್ಯ ಬಹಿರಂಗವಾಗಲಿದೆ.