ಬೆಂಗಳೂರಿಗೆ ಬಂದ ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್

ಜೂನ್ 26ರಂದು ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ. ಹುಬ್ಬಳ್ಳಿ-ಬೆಂಗಳೂರು ನಡುವೆ ಬಹು ನಿರೀಕ್ಷಿತ ರೈಲು ಸಂಚಾರ ಆರಂಭಿಸಲಿದೆ. ಈಗಾಗಲೇ ಹೊಸ ವಂದೇ ಭಾರತ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.
The arrival of the brand new Vande Bharat Express train in KSR Bengaluru sets the stage for the launch of Karnataka's second high-speed train, connecting Bengaluru and Hubballi-Dharwad. pic.twitter.com/LobHqnGP7v
— P C Mohan (@PCMohanMP) June 16, 2023
ಧಾರವಾರ, ಹುಬ್ಬಳ್ಳಿ-ಬೆಂಗಳೂರು ನಡುವೆ ಈ ವಂದೇಭಾರತ್ ರೈಲು ಸಂಚಾರ ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಈ ರೈಲು ಓಡಾಟಕ್ಕೆ ಚಾಲನೆ ನೀಡಲಿದ್ದಾರೆ. ಒಂದೇ ದಿನ ಭಾರತದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಕಾರ್ಯಾಚರಣೆ ಆರಂಭಿಸಲಿದೆ.
ಬೆಂಗಳೂರು-ಹುಬ್ಬಳ್ಳಿ, ಮುಂಬೈ-ಗೋವಾ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಿದ್ದಾರೆ. ಒಡಿಶಾದಲ್ಲಿ ರೈಲು ಅಪಘಾತದ ಬಳಿಕ ರೈಲ್ವೆ ಸಚಿವಾಲಯವು ಮುಂಬೈ-ಗೋವಾ ನಡುವೆ ಆರಂಭಿಸಬೇಕಿದ್ದ ವಂದೇ ಭಾರತ್ ರೈಲು ಸಂಚಾರದ ಆರಂಭಿಸುವ ಕಾರ್ಯಕ್ರಮ ರದ್ದಾಗಿತ್ತು.
ವಂದೇ ಭಾರತ್ ಓಡಾಡುವ ಸಮಯ
ನೈಋತ್ಯ ರೈಲ್ವೆ ಮೂಲಗಳ ಪ್ರಕಾರ, ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚರಿಸಲಿದೆ. ಕೆಎಸ್‌ಆರ್ ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್, ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. 487 ಕಿಲೋ ಮೀಟರ್ ದೂರವನ್ನು 7 ಗಂಟೆಯಲ್ಲಿ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ನಗರದಿಂದ ಬೆಳಗ್ಗೆ 5:45ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ಧಾರವಾಡ ನಿಲ್ದಾಣ ತಲುಪುವ ಸಾಧ್ಯತೆ ಇದೆ. ಧಾರವಾಡದಿಂದ ವಾಪಸ್ ಮಧ್ಯಾಹ್ನ 1:15 ಕ್ಕೆ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ಕೆಎಸ್‌ಆರ್ ನಿಲ್ದಾಣ ತಲುಪುವ ಸಾಧ್ಯತೆ ಇದೆ.
ಜನಶತಾಬ್ದಿ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಸಾಧ್ಯತೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿದ ನಂತರ ಸದ್ಯ ಕೆಎಸ್‌ಆರ್ ಬೆಂಗಳೂರು ನಗರ-ಹುಬ್ಬಳ್ಳಿ ನಡುವೆ ಸಂಚರಿಸುತ್ತಿರುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣದ ಸಮಯ ಬದಲಾಗುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ, ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣದ ಅವಧಿ ಕೂಡ 7 ಗಂಟೆಗಳಾಗಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 1:40 ಕ್ಕೆ ಹೊರಟು ರಾತ್ರಿ 8:55 ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸುತ್ತಿದ್ದು, 7.15 ಗಂಟೆಗಳು ಪ್ರಯಾಣದ ಅವಧಿಯಾಗಿದೆ.