Gruha lakshmi Scheme: ಗೃಹಲಕ್ಷ್ಮಿ ಯೋಜನೆ ಜಾರಿ ವಿಳಂಬದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಚಿಕ್ಕಮಗಳೂರು, ಜೂನ್, 17: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಅವಧೂತ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಚಂಡಿಯಾಗವನ್ನು ನೆರೆವೇರಿಸಿದರು. ಬಳಿಕ ಗೃಹಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಮಾತನಾಡಿದ ಅವರು, ಅಪ್ಲಿಕೇಶನ್ ಹಾಕಲು ಮತ್ತಷ್ಟು ವಿಳಂಬ ಆಗಲಿದ್ದು, ಈ ಹಿನ್ನೆಲೆ ಆಗಸ್ಟ್ 17 ಅಥವಾ 18ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ ಬೀಳಲಿದೆ ಎಂದು ಸ್ಪಷ್ಟನೆ ನೀಡಿದರು.
ಯೋಜನೆಯ ಬದಲಾವಣೆಯಿಂದ ವಿಳಂಬವಾಗುತ್ತಿದೆ ಅಷ್ಟೇ. ಗೃಹ ಲಕ್ಷ್ಮಿ ಯೋಜನೆ ಜನರಿಗೆ ಸರಳವಾಗಿ ಸಿಗಬೇಕು. ಹಾಗಾಗಿ, ಅಧಿಕಾರಿಗಳಿಗೆ ಕೆಲ ಬದಲಾವಣೆಗಳನ್ನು ಮಾಡಲು ಸೂಚನೆ ನೀಡಿದ್ದೇವೆ. ಮೊದಲು ಗ್ರಾಮ 1 ಕರ್ನಾಟಕ, ಬೆಂಗಳೂರು 1ನಲ್ಲಿ ಈ ಸೇವೆಯ ಲಾಭವನ್ನು ಪಡೆಯಬಹುದಾಗಿತ್ತು.
ಆದರೆ ಈಗ ಇದನ್ನು ಬಾಪೂಜಿ ಸೇವಾ ಕೇಂದ್ರವನ್ನು ಸೇರಿಸಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದ್ದು, ಇಲ್ಲಿಯೂ ಜನರು ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರುವವರಿಗೆ ಪ್ರಜಾಪ್ರತಿನಿಧಿಯನ್ನಾಗಿ ಮಾಡುತ್ತೇವೆ. ನಂತರ ಜನರಿಗೆ ಯಾವ ಖಾತೆಗೆ ಬೇಕೋ ಅದಕ್ಕೇ ಹಣ ಹಾಕಲಾಗುತ್ತದೆ. ಹಾಗೆಯೇ ನಿನ್ನೆ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ.
ಅಧಿಕಾರಿಗಳು ಈಗಾಗಲೇ ಸಾಫ್ಟ್ವೇರ್ ರೆಡಿ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲಿಯೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮದಲ್ಲಿ ಹೇಳಿದರು.
ಬಿಜೆಪಿ ವಿರುದ್ಧ ಕೆ.ಜೆ.ಜಾರ್ಜ್ ಆಕ್ರೋಶ
ಹಾಗೆಯೇ ಕಾಂಗ್ರೆಸ್ ಪಕ್ಷಕ್ಕೆ ಜಾತಿ, ಧರ್ಮದ ಚೌಕಟ್ಟಿಲ್ಲ. ಎಲ್ಲಾ ಜಾತಿ, ಜನಾಂಗವನ್ನು ಸಮಾನವಾಗಿ ಕಾಣುತ್ತದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಿಕ್ಕಮಗಳೂರಿನಲ್ಲಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಉದ್ದಗಲಕ್ಕೂ ಎಲ್ಲಾ ಭಾಷಿಗರನ್ನು ಒಳಗೊಂಡಿರುವ ಪಕ್ಷ ಕಾಂಗ್ರೆಸ್. ಹಾಗೆಯೇ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಪುರ್ನಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು ಆಗಿದೆ. ಅಲ್ಲದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ರಾಜ್ಯದವರಾದ ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇನ್ನು ನೆಹರು ಕುಟುಂಬ ಅಧಿಕಾರಕ್ಕಾಗಿ ಆಸೆ ಪಡದೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಕಾಂಗ್ರೆಸ್‍ನ ಐದು ಗ್ಯಾರಂಟಿಗಳಿಗೆ ಮೂಲ ಕಾರಣ ರಾಹುಲ್ ಗಾಂಧಿ, ಐದು ಗ್ಯಾರೆಂಟಿಯನ್ನು ನಾವು ಯಾರಿಗೆ ಕೊಟ್ಟಿದ್ದೇವೆ, ನಮ್ಮ ರಾಜ್ಯದಲ್ಲಿ ಇರತಕ್ಕಂತ ಮಧ್ಯಮ ವರ್ಗದವರು, ಆರ್ಥಿಕತೆಯಿಂದ ಹಿಂದುಳಿದವರು, ಬಡವರಿಗೆ ಅವರ ಆರ್ಥಿಕ ಪರಿಸ್ಥಿತಿ ಉತ್ತೇಜಿಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟಿದೆ ಎಂದರು.
ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರಿಗೆ ಉತ್ತಮ ಯೋಜನೆಗಳನ್ನು ರೂಪಿಸಿದೆ. ಇದನ್ನು ಸಹಿಸದ ಬಿಜೆಪಿಗರು ಬಾಯಿ ಬಡಿದು ಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ರಾಷ್ಟ್ರ, ರಾಜ್ಯ, ಜಿಲ್ಲೆ ಒಗ್ಗಟ್ಟಿನ ಮಂತ್ರದಿಂದ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಕಾರ್ಯಕರ್ತರು ಎಲ್ಲಾ ಶಾಸಕರಿಗೆ ಶಕ್ತಿ ಕೊಡುವ ಕಾರ್ಯವನ್ನು ಮಾಡಬೇಕು. ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಜನ, ಶಾಸಕರು ಒಗ್ಗಟ್ಟಾಗಿ ಉಸ್ತುವಾರಿ ಸಚಿವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.