ಮುಂದಿನ ತಿಂಗಳ ವಿದ್ಯುತ್ ಬಿಲ್ ಕಡಿಮೆ ಆಗಲಿದೆ: ಕೈಗಾರಿಕೋದ್ಯಮಿಗಳ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು, ಜೂನ್ 19: ದಿಢೀರ್ ವಿದ್ಯುತ್ ದರ ಏರಿಕೆ ವಿರೋಧಿಸಿ ಕೆಲವು ಕೈಗಾರಿಕಾ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿವೆ. ಜೂನ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಮಧ್ಯೆ ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ.
ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್‌ಗಳು ಕಡಿಮೆಯಾಗಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ರಾಜ್ಯದ ಹುಬ್ಬಳ್ಳಿ ಮೂಲದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ವಿದ್ಯುತ್ ದರ ಏರಿಕೆ ವಿರೋಧಿಸಿ ಜೂನ್ 22 ರಂದು ಬಂದ್‌ಗೆ ಕರೆ ನೀಡಿದೆ. ಈ ಸಂಬಂಧ ಕೈಗಾರಿಕೋದ್ಯಮಿಗಳ ಅನುಮಾನಗಳನ್ನು ನಿವಾರಿಸಲು ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿದ್ದೇವೆ. ಅಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸುತ್ತೇವೆ ಎಂದರು.
ವಿದ್ಯುತ್ ದರ ಏರಿಕೆ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಅವರಿಗೆ ಮನವರಿಕೆ ಮಾಡಲು, ಸತ್ಯ ಮತ್ತು ಅಂಕಿ ಅಂಶಗಳನ್ನು ನೀಡಲಾಗಿದೆ. ಸರ್ಕಾರದ ಅಧೀಕಾರಿಗಳು ಅವರಿಗೆ ಮನವರಿಕೆ ಮಾಡುತ್ತಾರೆ. ಈಗಾಗಲೇ ಅಧಿಕಾರಿಗಳು ಒಂದೊಮ್ಮೆ ಮಾತನಾಡಿದ್ದಾರೆ.
ಕಳೆದ ಎರಡು ತಿಂಗಳ ವಿದ್ಯುತ್ ಶುಲ್ಕ ವನ್ನು ಜೂನ್ ಮೊದಲ ವಾರ ಒಂದೇ ಬಿಲ್‌ನಲ್ಲಿ ಜನರು ಸ್ವೀಕರಿಸಿದ್ದಾರೆ. ಇದರಿಂದಾಗಿ ಜನರಿಗೆ, ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಬಿಲ್ ವಿಪರೀತವಾಗಿ ಹೆಚ್ಚಾಗಿದೆ ಎಂಬಂತೆ ಕಾಣುತ್ತಿದೆ. ಮುಂದಿನ ತಿಂಗಳು ಒಂದೇ ತಿಂಗಳ ಬಿಲ್ ಬರುವುದರಿಂದ ಶುಲ್ಕ ಕಡಿಮೆ ಇರಲಿದೆ ಎಂದು ಮುಖ್ಯಮಂತ್ರಿಗಳು ಸಮಜಾಯಿಸಿ ನೀಡಿದರು.
ಮುಂದಿನ ತಿಂಗಳಿಂದ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ
ವಿದ್ಯುತ್ ಸುಂಕವು ಕಡಿಮೆಯಾಗುವುದಿಲ್ಲ. ಎರಡು ತಿಂಗಳ ಬಿಲ್ ನೀಡಿದ್ದರಿಂದ ಈ ಸುಂಕ ಭಾರೀ ಪ್ರಮಾಣದಲ್ಲಿ ಕಂಡು ಬರುತ್ತದೆ. ಮುಂದಿನ ತಿಂಗಳು, ಪ್ರತಿ ತಿಂಗಳು ಬಿಲ್ಲುಗಳನ್ನು ನೀಡಲಾಗುತ್ತದೆ. ತದನಂತರ ಬಿಲ್ಲಿಂಗ್ ಮೊತ್ತವು ಕಡಿಮೆಯಾಗುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಬಂದ್‌ಗೆ ಕರೆ ನೀಡಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (KCCI)ಯು ತನ್ನ ಸದಸ್ಯರಿಗೆ ನೀಡಿದ ಹೇಳಿಕೆಯಲ್ಲಿ ವಿದ್ಯುತ್ ಶುಲ್ಕದಲ್ಲಿ ಬೆಲೆ ಏರಿಕೆ ಅಸಹಜವಾಗಿದೆ ಎಂದು ತಿಳಿಸಿದೆ. ಜೂನ್ 22 ರಂದು ಎಲ್ಲಾ ವ್ಯಾಪಾರ ಮತ್ತು ಉದ್ಯಮಗಳು ತಮ್ಮ ಸಂಸ್ಥೆಗಳನ್ನು ಮುಚ್ಚಲು ಕೆಸಿಸಿಐ ವಿನಂತಿಸಿದೆ. ಈ ಮೂಲಕ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ವಿದ್ಯುಚ್ಛಕ್ತಿ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆ ಕ್ರಮ ವಿರುದ್ಧ ಪ್ರತಿಭಟಿಸಲು ಮುಂದಾಗಿದೆ.
ರಾಜ್ಯದಲ್ಲಿ ಈಗಾಗಲೇ ಕಳೆದ ಎಂಟು ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮ ಮತ್ತದರ ಗಂಭೀರತೆ ಕುರಿತು ಸರ್ಕಾರಕ್ಕೆ ಕೈಗಾರಿಕೋದ್ಯಮಿಗಳು ತಿಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಸರ್ಕಾರಿ ಮಟ್ಟದ ಅಧಿಕಾರಿಗಳಾಗಲಿ ಅಥವಾ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಪರಿಹಾರ, ಭರವಸೆ ದೊರೆತಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಜ್ಯ ಬಂದ್‌ಗೆ ಕೈಗಾರಿಕೆ ಸಂಸ್ಥೆಗಳು ಒಟ್ಟಾಗಿ ಕರೆ ನೀಡಿವೆ.
ಸರ್ಕಾರದ ವಿರುದ್ಧ ಪ್ರತಿಭಟನೆ ಅಲ್ಲ
ಬಂದ್ ಬಗ್ಗೆ ಪ್ರತಿಕ್ರಿಯಿಸಿರುವ ಕೆಸಿಸಿಐ ಹಂಗಾಮಿ ಅಧ್ಯಕ್ಷ ಸಂದೀಪ್ ಬಿದಸಾರಿಯಾ ಅವರು, ನಾವು ಸರ್ಕಾರದ ವಿರುದ್ಧ ಹೋಗುತ್ತಿಲ್ಲ. ನಮ್ಮ ಧ್ವನಿ ಸರ್ಕಾರಕ್ಕೆ ಮುಟ್ಟಿಸಲು, ಮನವಿ ತಿಳಿಸಲು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಆಗ್ರಹವನ್ನು ಸರ್ಕಾರ ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದ ಬೃಹತ್ ಉದ್ಯಮ ಸಂಸ್ಥೆಯಾದ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಬಂದ್ ಕರೆಗೆ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.
200 ಯೂನಿಟ್‌ವರೆಗೆ ಉಚಿತ ಗೃಹ ವಿದ್ಯುತ್ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಚುನಾವಣಾ ಖಾತರಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೆ ಕೆಲವೇ ದಿನಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ₹2.89 ಹೆಚ್ಚಿಸಲಾಗಿದೆ. ಅಲ್ಲದೇ ಇತರೆ ಬಿಲ್ ಸಹ ಹಾಕಲಾಗಿದೆ. ನಿರ್ದಿಷ್ಟ ಬೆಲೆ ಸಹ ಏರಿಕೆ ಆಗಿದೆ.
ಕಳೆದ ಏಪ್ರಿಲ್ ತಿಂಗಳಿನಿಂದ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPCE) ಬಾಕಿ ಇರುವ ಕಾರಣ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮಾಹಿತಿ ನೀಡಿದೆ.