Panaji: ಪೊಂಡಾ ತಾಲೂಕಿನಾದ್ಯಂತ ಧಾರಾಕಾರ ಮಳೆ, ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಪಣಜಿ: ಮುಂಗಾರು ಆರಂಭವಾದ ಕೆಲವೇ ದಿನಗಳಲ್ಲಿ ನಾಗರಿಕರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಮಳೆಗಾಲ ಪೂರ್ವ ಸಿದ್ಧತಾ ಕಾರ್ಯ ಕೈಗೊಳ್ಳದಿರುವ ದೋಷಗಳೂ ಬೆಳಕಿಗೆ ಬರುತ್ತಿವೆ. ಕಳೆದ ಎರಡು ದಿನಗಳಿಂದ ಪೊಂಡಾ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಪೊಂಡಾ ತಾಲೂಕಿನಲ್ಲಿ ಕೊಳಚೆ ನೀರು ಮನೆ, ಅಂಗಡಿಗಳಿಗೆ ನುಗ್ಗಿದೆ.
ಸ್ಥಳೀಯ ನಾಗರಿಕರು ಭಾರೀ ನಷ್ಟ ಅನುಭವಿಸಿದ್ದಾರೆ.
ಪೊಂಡಾ ಪೋಲೀಸ್ ಠಾಣೆ ಮುಂಭಾಗದ ನಾಲೆ ತುಂಬಿದ್ದರಿಂದ ಕಾಲುವೆಯಿಂದ ಜಿ.ಡಿ.ಖಾಸ್ನೀಸ್ ಅವರ ಮನೆಗೆ ಮೊಣಕಾಲಿನವರೆಗೂ ನೀರು ನುಗ್ಗಿದೆ. ಜತೆಗೆ ಇವರ ಮನೆ ಎದುರಿನ ಅಂಗಳದಲ್ಲಿರುವ ತುಳಸಿ ಮರಗಳು ವೃಂದಾವನ ಕಾಲುವೆಯ ನೀರಿನಲ್ಲಿ ಮುಳುಗಿವೆ. ಈ ಭಾಗದಲ್ಲಿರುವ ಅಂಗಡಿ, ಬೇಕರಿಗಳಿಗೂ ನೀರು ನುಗ್ಗಿದೆ. ಕೊಳಚೆ ನೀರು ಹರಿದುಹೋಗಲು ಆಡಳಿತ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆ ಬಳಿ ರಸ್ತೆಯಲ್ಲೇ ನೀರು ತುಂಬಿ ಹರಿಯುತ್ತಿದ್ದು, ರಸ್ತೆಯೇ ರಾಜಕಾಲುವೆಯಾಗಿದೆ.
ಇದು ಸಾರಿಗೆಯ ಸಂಚಾರದ ಮೇಲೆ ಒಟ್ಟಾರೆ ಪರಿಣಾಮ ಬೀರಿದೆ. ಕೊಳಚೆ ನೀರು ಮನೆಗಳಿಗೆ ನುಗ್ಗಿದ್ದರಿಂದ ನಾಗರಿಕರು ಮನೆಗಳಲ್ಲಿ ವಾಸ ಮಾಡಲು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಗಾರು ಮಳೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಗೂ ಮುನ್ನ ನಡೆದ ಸ್ವಚ್ಛತಾ ಕಾರ್ಯಗಳ ಬಗ್ಗೆ ಪ್ರಶ್ನೆ ಮೂಡಿದೆ. ನಾಗರಿಕರೂ ಆಡಳಿತದ ಕೆಲಸಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಕೆಲ ಸ್ಥಳೀಯರು ಕಾಲುವೆಗಳಲ್ಲಿ ಕಸ ಸುರಿಯುವುದಕ್ಕೆ ನಾಗರಿಕರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ.