fbpx
Feature articlesKarnataka News

ಧಮ್ಮು – ತಾಖತ್ತು – ಸವಾಲು – ಜವಾಬು……….. ಹೇಳಿದ್ದೆಲ್ಲಾ ಸುದ್ದಿಯಾದರೆ ಅದು ಹುಚ್ಚರ ಸಂತೆಯಾಗುತ್ತದೆ.

ಧಮ್ಮು – ತಾಖತ್ತು – ಸವಾಲು – ಜವಾಬು………..

ಕೆಲವು ಶಾಸಕರು ಮತ್ತು ಸಂಸದರು ತೀರಾ ಕೀಳು ಮಟ್ಟದ ಮಾಧ್ಯಮ ಮಾತುಕತೆಗಳಲ್ಲಿ ತೊಡಗಿದ್ದಾರೆ. ಅವರಿಗೆ ದೊಡ್ಡ ಪ್ರಚಾರ ನೀಡಿ ವೇದಿಕೆ ಕಲ್ಪಿಸುತ್ತಿರುವುದು ಸಹ ಅಷ್ಟೇ ಕೀಳು ಮಟ್ಟದ ಕೆಲವು ಸುದ್ದಿ ವಾಹಿನಿಗಳು……

ತಾಖತ್ತು ಧಮ್ಮು ಮುಂತಾದ ಶಬ್ದಗಳನ್ನು ಬಳಸುತ್ತಾ ಒಬ್ಬರಿಗೊಬ್ಬರು ಸವಾಲು ಹಾಕುತ್ತಾರೆ. ಅದರಲ್ಲೂ ಇತ್ತೀಚೆಗೆ ಮೈಸೂರಿನ ಸಂಸದರು, ಚಿಕ್ಕಬಳ್ಳಾಪುರದ ಶಾಸಕರು ಸೇರಿ ಅನೇಕರು ಮೊದಲಿನಿಂದಲೂ ಬಹಿರಂಗ ಚರ್ಚೆ ಎಂಬ ಸವಾಲು ಒಡ್ಡುತ್ತಾರೆ ಬೀದಿ ಜಗಳಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹಾಗೆ. ಅದಕ್ಕೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು ಪತ್ರಕರ್ತರೆಂಬ ಹೆಸರಿನ ಕೆಲವು ಅಪ್ರಬುದ್ದ ಹೊಟ್ಟೆಪಾಡಿನ ದಲ್ಲಾಳಿಗಳು.

ಸಾರ್ವಜನಿಕ ಸೇವೆ ಮಾಡಿ ಎಂದು ಜನ ಮತ ನೀಡಿ ಆಯ್ಕೆ ಮಾಡಿದರೆ ಇವರು ನನ್ನಂತ ಕೆಲಸವಿಲ್ಲದವರ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಾ ಜನರಲ್ಲಿ ಅಸಹ್ಯ ಹುಟ್ಟಿಸುತ್ತಿದ್ದಾರೆ.

ಮಾನ್ಯ ಸಂಸದರೇ ಮತ್ತು ಶಾಸಕರೇ ನಿರ್ಜೀವ ಕ್ಯಾಮರಾ ಮುಂದೆ ನಿಂತು ನೂರಾರು ಕಿಲೋಮೀಟರ್ ದೂರದಲ್ಲಿರುವ ಯಾರಿಗೆ ಸವಾಲು ಹಾಕುವಿರಿ, ಏನು ಸವಾಲು ಹಾಕುವಿರಿ, ಅದನ್ನು ಸಾರ್ವಜನಿಕವಾಗಿ ಏಕೆ ಹೇಳುವಿರಿ, ನೀವು ಆಯ್ಕೆಯಾಗಿರುವ ಕ್ಷೇತ್ರಗಳು ನಿಮ್ಮ ಸ್ವಂತ ಆಸ್ತಿಯೇ, ನೀವು ಸರ್ಕಾರ ನೀಡುವ ಕೂಲಿಯ ಆಳುಗಳು ಎಂಬ ಅರಿವಿಲ್ಲವೇ…..

ಕೆಲವು ಪ್ರಶ್ನೆಗಳಿಗೆ ಮೊದಲು ದಯವಿಟ್ಟು ಉತ್ತರಿಸಿ….

ಸಮಾಜದ ಅತ್ಯಂತ ಮೂಲಭೂತ ಅವಶ್ಯಕತೆಗಳಾದ,…..

1) ನಿಮ್ಮ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಯ ಕಟ್ಟಡಗಳು ಸುಸಜ್ಜಿತವಾಗಿವೆಯೇ, ಶೌಚಾಲಯ ವ್ಯವಸ್ಥೆ ಆಗಿದೆಯೇ, ಅವಶ್ಯಕತೆ ಇರುವಷ್ಟು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಇದ್ದಾರೆಯೇ, ನಿಮ್ಮ ಕ್ಷೇತ್ರದ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹೆಚ್ಚು ಗುಣಮಟ್ಟ ಹೊಂದಿವೆಯೇ…

2) ನಿಮ್ಮ ಕ್ಷೇತ್ರದ ಸರ್ಕಾರಿ ‌ಆಸ್ಪತ್ರೆಗಳು ಸಾರ್ವಜನಿಕ ಬೇಡಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆಯೇ, ವೈದ್ಯರು ದಾದಿಯರು ಸಾಕಷ್ಟು ಇದ್ದಾರೆಯೇ, ಔಷಧಿಗಳ ಸಂಗ್ರಹ ಇದೆಯೇ, ಸದಾ ಸಿದ್ದವಿರುವ ತುರ್ತು ವೈದ್ಯಕೀಯ ವಾಹನ ಇದೆಯೇ, ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ತೃಪ್ತಿಕರ ಸೇವೆ ಸಿಗುತ್ತಿದೆಯೇ…..

3) ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಹೋಟೆಲುಗಳು, ಅಂಗಡಿಗಳಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಪದಾರ್ಥಗಳು ದೊರೆಯುತ್ತಿವೆಯೇ, ಶುದ್ದ ಕುಡಿಯುವ ನೀರಿನ ಖಾತ್ರಿ ಇದೆಯೇ, ಕಸ ವಿಲೇವಾರಿಗೆ ವ್ಯವಸ್ಥೆ ಆಗಿದೆಯೇ….

4) ಮಕ್ಕಳು, ಯುವಕರು, ಮಹಿಳೆಯರು, ವೃದ್ದರು‌ ಸೇರಿ ಎಲ್ಲಾ ಜನರಿಗೆ ಜಾತಿ ರಹಿತ, ಭ್ರಷ್ಟಾಚಾರ ರಹಿತ, ವಂಚನೆ ರಹಿತ ನ್ಯಾಯಪರ ರಕ್ಷಣೆ ಇದೆಯೇ…….

ಪತ್ರಕರ್ತರೂ ಆಗಿದ್ದ ಸನ್ಮಾನ್ಯ ಪ್ರತಾಪ್ ಸಿಂಹ ಅವರೇ, ಇತ್ತೀಚಿನ ಚುನಾವಣೆಯ‌ ಅತ್ಯಂತ ಭರವಸೆಯ ಯುವ ನಾಯಕ ಪ್ರದೀಪ್ ಈಶ್ವರ್ ಅವರೇ ಹಾಗು ಈ ರೀತಿಯ ಸವಾಲು ಜವಾಬುಗಳಲ್ಲಿ ಕಾಲ ಕಳೆಯುತ್ತಿರುವ ಎಲ್ಲಾ ಜನ ಪ್ರತಿನಿಧಿಗಳೇ ನಿಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮೆಡಿಕಲ್ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಸ್ವಲ್ಪ ಆಸಕ್ತಿ ವಹಿಸಿ ಫೈಲ್‌ಗಳನ್ನು ಅಪ್ರೂವ್ ಮಾಡಿಸಿದರೆ ಹೇಗೋ ಆಗುತ್ತದೆ. ಆದರೆ ಈ ಮೂಲಭೂತ ಕೆಲಸ ಮಾಡುವವರು ಯಾರು……

ಕೇಂದ್ರ ಸರ್ಕಾರ ಮಾಡಿದ್ದೆಲ್ಲಾ ಸರಿ ಎಂದು ಬಿಜೆಪಿ ಸಂಸದರು, ರಾಜ್ಯ ಸರ್ಕಾರ ಮಾಡಿದ್ದೆಲ್ಲಾ ಸರಿ ಎಂದು ಕಾಂಗ್ರೇಸ್ ಶಾಸಕರು ಸವಾಲು ಹಾಕುತ್ತಾ ಟಿವಿ ಮೊಬೈಲ್ ಕ್ಯಾಮರಾಗಳ ಮುಂದೆ ಮಾಡೆಲಿಂಗ್ ಮಾಡುತ್ತಾ ಓಡಾಡುತ್ತಿದ್ದರೆ…..

ನಾಯಿ ಕಚ್ಚಿ ಮಕ್ಕಳು, ಹಾವು ಕಚ್ಚಿ ರೈತರು, ಕುಡಿದು ವಾಹನ ಚಲಾಯಿಸುವ ಚಾಲಕರು, ಮತ್ತೇರಿಸಿ ಕೊಲೆಗಳು, ಅಮಲೇರಿಸಿ ಅತ್ಯಾಚಾರಗಳು, ಅಜ್ಞಾನದಿಂದ ‌ಆತ್ಮಹತ್ಯೆಗಳು, ಬಡತನದಿಂದ ವೇಶವಾಟಿಕೆಗಳು, ಅನಿವಾರ್ಯವಾಗಿ ಕಳ್ಳತನಗಳು ನಿಮಿಷಗಳ ಲೆಕ್ಕದಲ್ಲಿ ನಡೆಯುತ್ತಿದೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ಯಾರು ತೆಗೆದುಕೊಳ್ಳುವವರು…..

ಪ್ರಧಾನಿಯಾಗಿ ನರೇಂದ್ರ ಮೋದಿಯಿದ್ದರೂ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದರೂ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಶೇಕಡಾ 90% ಸಾರ್ವಜನಿಕ ಅವಶ್ಯಕತೆ ಇರುವ ಕೆಲಸಗಳು ಲಂಚವಿಲ್ಲದೇ ಆಗುವುದೇ ಇಲ್ಲ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಏನೂ ಕೆಲಸ ಮಾಡದೆ ಮನೆಯಲ್ಲಿ ಕುಳಿತಿರುವವರು ಲಂಚ ಈಗ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ……

ನೀವೊಮ್ಮೆ ಡೆನ್ಮಾರ್ಕ್, ಸ್ವೀಡನ್, ನಾರ್ವೆ, ಸ್ವಿಟ್ಜರ್ಲೆಂಡ್‌, ಸಿಂಗಪುರ, ದುಬೈ ಮುಂತಾದ ದೇಶಗಳಿಗೆ ಹೋಗಿ ಅಲ್ಲಿನ ಸಾರಿಗೆ ಇಲಾಖೆ, ಪೋಲೀಸ್ ಇಲಾಖೆ, ಮನೆ ಜಮೀನು ರಿಜಿಸ್ಟರ್ ಮಾಡಿಸುವ ಇಲಾಖೆಗಳಿಗೆ ಹೋಗಿ ಲಂಚದ ಆಮಿಷ ಒಡ್ಡಿ ನಿಮ್ಮ ಅನೈತಿಕ ಕೆಲಸ ಮಾಡಿಸಿಕೊಳ್ಳುವ ಪ್ರಯತ್ನ ಮಾಡಿ. ಆಗ ನಿಮಗೆ ನಮ್ಮ ದೇಶದ ಬ್ರಹ್ಮಾಂಡ ಭ್ರಷ್ಟಾಚಾರದ ವಿರಾಟ್ ರೂಪ ಅರ್ಥವಾಗುತ್ತದೆ ಮತ್ತು ನಿಮ್ಮ ಅಯೋಗ್ಯತನವೂ ತಿಳಿಯುತ್ತದೆ. ಅವು ಸಂಪೂರ್ಣ ಲಂಚ ಮುಕ್ತ ಇಲ್ಲದಿರಬಹುದು. ಆದರೆ ಖಂಡಿತ ಬಡವರ ಅಸಹಾಯಕರ ರಕ್ತ ಹೀರುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ಪತ್ರಕರ್ತರು ಅಷ್ಟೇ, ಯಾರೋ ಹುಚ್ಚರ ರೀತಿ ಸವಾಲು ಜವಾಬು ಹೇಳಿಕೆಗಳಿಗೆ ವೇದಿಕೆ ಕಲ್ಪಿಸದೇ ಅಲ್ಲಿಯೇ ” ಸ್ವಾಮಿ ಶಾಸಕ ಸಂಸದರೇ ನೀವೇನು ರೌಡಿಗಳಲ್ಲ ತಾಖತ್ತು ಧಮ್ಮು ಪ್ರಶ್ನಿಸಲು. ಮಾಧ್ಯಮಗಳ ಮುಂದೆ ಉತ್ತರ ಕುಮಾರರಂತೆ ಘರ್ಜಿಸುವ ಬದಲು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ. ಇನ್ನೂ ಹೆಚ್ಚೆಂದರೆ ನಿಮ್ಮ ಪಕ್ಷಗಳ ಕಾರ್ಯಕರ್ತರ ಮುಂದೆ ಬೇಕಾದರೆ ರಾಜಕೀಯ ಮಾತನಾಡಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಜನರ ಸಮಸ್ಯೆಗಳ ಪರಿಹಾರದ ಯೋಜನೆಗಳ ಬಗ್ಗೆ ಮಾತ್ರ ಮಾಹಿತಿ ನೀಡಿ. ಕಾಂಗ್ರೇಸ್ ಬಿಜೆಪಿ ಉನ್ನತ ನಾಯಕರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಪಕ್ಷದ ಅಧ್ಯಕ್ಷರ ಬಳಿ ದೂರು ನೀಡಿ. ಅದನ್ನು ಸಾರ್ವಜನಿಕರಿಗೆ ಹೇಳಿದರೆ ಅವರೇನು ಮಾಡುತ್ತಾರೆ. ದಯವಿಟ್ಟು ಕನಿಷ್ಠ ಸಾಮಾನ್ಯ ಪ್ರಜ್ಞೆ ನಿಮಗಿರಲಿ ” ಎಂದು ಅವರ ಮುಖಕ್ಕೆ ನೇರವಾಗಿ ಹೇಳುವ ಜವಾಬ್ದಾರಿ ಪ್ರದರ್ಶಿಸಬೇಕು. ಆಗ ಜನ ಪ್ರತಿ ನಿಧಿಗಳಲ್ಲಿ ಸ್ವಲ್ಪ ಸುಧಾರಣೆ ಬರಬಹುದು.

ಹೇಳಿದ್ದೆಲ್ಲಾ ಸುದ್ದಿಯಾದರೆ ಅದು ಹುಚ್ಚರ ಸಂತೆಯಾಗುತ್ತದೆ.

ಒಂದು ಯುವ ಜನಾಂಗ ನಮ್ಮನ್ನು ನೋಡುತ್ತಿದೆ, ನಮ್ಮ ಹಾವ ಭಾವ ಭಾಷೆ ನಡವಳಿಕೆಗಳಿಂದ ಪ್ರೇರಿತವಾಗುತ್ತಿದೆ, ಅದು ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಪ್ರಜ್ಞೆ ನಮಗೆ ಇಲ್ಲವಾದರೆ ಅದಕ್ಕಿಂತ ಅನಾಗರಿಕತೆ ಯಾವುದೂ ಇಲ್ಲ ದಯವಿಟ್ಟು ಎಚ್ಚರಿಕೆ ವಹಿಸಿ…………….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: