3 ರಾಜ್ಯಗಳ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಡೇಟ್ ಫಿಕ್ಸ್: ಯಾವ ರಾಜ್ಯ, ಯಾರ ಸ್ಥಾನ, ಯಾವ ದಿನಾಂಕ ತಿಳಿಯಿರಿ

ನವದೆಹಲಿ, ಜೂನ್ 27: ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
ರಾಜ್ಯಸಭಾ ಸದಸ್ಯರ ಅವಧಿ ಮುಗಿದಿರುವ ಕಾರಣ ತೆರವಾಗುತ್ತಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇದರಲ್ಲಿ ಗುಜರಾತಿನಿಂದ ಆಯ್ಕೆಯಾಗಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಸ್ಥಾನವೂ ಸೇರಿದೆ.
ಜೈಶಂಕರ್, ದಿನೇಶ್ಚಂದ್ರ ಜೆಮಲ್‌ಭಾಯ್ ಅನವಾಡಿಯಾ ಮತ್ತು ಲೋಖಂಡವಾಲಾ ಜುಗಲ್‌ಸಿನ್ಹ್ ಮಾಥುರ್ಜಿ ಗುಜರಾತ್‌ನ ಮೂವರು ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಮೂವರು ಸದಸ್ಯರ ಅವಧಿ ಆಗಸ್ಟ್ 18 ರಂದು ಕೊನೆಗೊಳ್ಳಲಿದೆ.
ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಡಿ. ತೆಂಡೂಲ್ಕರ್ ಅವರ ಅವಧಿ ಜುಲೈ 28 ರಂದು ಕೊನೆಗೊಳ್ಳಲಿದೆ. ಆ ಕಾರಣ ಗೋವಾದ ಒಂದು ಸ್ಥಾನಕ್ಕೆ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒ’ಬ್ರಿಯಾನ್, ಡೋಲಾ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸೇನ್, ಸುಶ್ಮಿತಾ ದೇವ್, ಶಾಂತಾ ಛೆಟ್ರಿ ಮತ್ತು ಸುಖೇಂದು ಶೇಖರ್ ರೇ ಅವರ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ ಅವರ ಅವಧಿಯೂ ಆಗಸ್ಟ್ 18 ರಂದು ಕೊನೆಗೊಳ್ಳಲಿದೆ. ಈ ಸ್ಥಾನಕ್ಕೂ ಜುಲೈ 24 ರಂದೇ ಚುನಾವಣೆ ನಡೆಯಲಿದೆ.
ಜುಲೈ 6 ರಂದು ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗುವುದು. ನಾಮಪತ್ರಗಳ ಕೊನೆಯ ದಿನಾಂಕ ಜುಲೈ 13. ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ ಜುಲೈ 17. ಜುಲೈ 24 ರಂದು ಮತದಾನ ಮತ್ತು ಎಣಿಕೆ ನಡೆಯಲಿದೆ.
ಏಪ್ರಿಲ್ 11 ರಂದು ತೃಣಮೂಲ ಕಾಂಗ್ರೆಸ್ ಸಂಸದ ಲುಯಿಜಿನ್ಹೋ ಜೋಕ್ವಿಮ್ ಫಲೈರೊ ಅವರು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ( ಪಶ್ಚಿಮ ಬಂಗಾಳ ) ಉಪಚುನಾವಣೆಯು ಇದೇ ದಿನ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ.