ಆಗಸ್ಟ್ 15 ರಿಂದ ಎಲ್ಲಾ ಪಂಚಾಯತ್ ಗಳಲ್ಲಿ ‘ಡಿಜಿಟಲ್ ಪಾವತಿ’ ಕಡ್ಡಾಯ: ಪಂಚಾಯತ್ ರಾಜ್ ಸಚಿವಾಲಯ

ದೇಶದಾದ್ಯಂತ ಆಗಸ್ಟ್ 15 ರಿಂದ ಎಲ್ಲಾ ಪಂಚಾಯತ್ ಗಳ ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್ ಪಾವತಿ ಬಳಸಲಿದ್ದು, ಯುಪಿಐ ಪಾವತಿಗೆ ಶಕ್ತ ಎಂದು ಘೋಷಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.
ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಸಚಿವಾಲಯ, ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರಂತಹ ಗಣ್ಯರ ಸಮ್ಮುಖದಲ್ಲಿ ‘ಯುಪಿಐ ಪಾವತಿ’ ಅನುಕೂಲವಿರುವ ಪಂಚಾಯತ್ ಗಳೆಂದು ಘೋಷಿಸಬೇಕು ಮತ್ತು ಅವುಗಳನ್ನು ಉದ್ಘಾಟಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಶೇ. 98 ರಷ್ಟು ಪಂಚಾಯತ್ ಗಳು ಈಗಾಗಲೇ ಯುಪಿಐ ಆಧಾರಿತ ಪಾವತಿಗಳನ್ನು ಬಳಸಲು ಪ್ರಾರಂಭಿಸಿದ್ದು, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಂಎಫ್‌ಎಸ್) ಮೂಲಕ ಸುಮಾರು 1.5 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿದೆ. ಚೆಕ್ ಮತ್ತು ನಗದು ಪಾವತಿಯನ್ನು ಬಹುತೇಕ ನಿಲ್ಲಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಯುಪಿಐ ಪ್ಲಾಟ್ಫಾರ್ಮ್ಗಳಾದ GPay, PhonePay, Paytm, BHIM, Mobikwik, WhatsApp Pay, Amazon Pay ಮತ್ತು Bharat Pe ನಿಂದ ಸಂಪರ್ಕಿತ ವ್ಯಕ್ತಿಗಳ ವಿವರಗಳೊಂದಿಗೆ ಪಟ್ಟಿಯನ್ನು ಸಚಿವಾಲಯವು ಹಂಚಿಕೊಂಡಿದೆ. ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಜುಲೈ 15 ರೊಳಗೆ ಪಂಚಾಯತ್ಗಳು ಸೂಕ್ತ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕು ಮತ್ತು ಜುಲೈ 30 ರೊಳಗೆ ಮಾರಾಟಗಾರರನ್ನು ಅಂತಿಮಗೊಳಿಸಬೇಕು. ಡಿಜಿಟಲ್ ವಹಿವಾಟು ಸಕ್ರಿಯದಿಂದ ಭ್ರಷ್ಟಾಚಾರ ತಡೆಗೆ ಸಹಾಯ ಮಾಡುತ್ತದೆ ಎಂದು ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಹೇಳಿದ್ದಾರೆ. ಬಹುತೇಕ ಪಂಚಾಯಿತಿಗಳು ಈಗ ಡಿಜಿಟಲ್ ಪಾವತಿಯನ್ನು ಬಳಸುತ್ತಿವೆ. ಇದು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ, ಯೋಜನೆಯಿಂದ ಪಾವತಿಯವರೆಗೆ ಎಲ್ಲವೂ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ ಎಂದು ಪಾಟೀಲ್ ತಿಳಿಸಿದ್ದಾರೆ.