Tirupati; ರಾಜ್ಯದ ತಿರುಪತಿ ಭಕ್ತರು ನೋಡಲೇಬೇಕಾದ ಸುದ್ದಿ ಇದು!?

ತಿರುಪತಿ ;- ರಾಜ್ಯದ ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಆಗಸ್ಟ್ ವೇಳೆಗೆ ತಿರುಪತಿಯಲ್ಲಿ ಕರ್ನಾಟಕ ಭವನದ 194 ಸುಸಜ್ಜಿತ ಕೊಠಡಿಗಳು ಭಕ್ತರಿಗೆ ಲಭ್ಯವಾಗಲಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕೆಂದು 132 ಕೊಠಡಿಗಳ ಮೊದಲ ಬ್ಲಾಕ್ ಹಾಗೂ 110 ಕೊಠಡಿಗಳ ಎರಡನೇ ಬ್ಲಾಕ್, 36 ವಿವಿಐಪಿ ರೂಮ್ ಗಳಿರುವ ಸೂಟ್ ಬ್ಲಾಕ್, 500 ಜನರು ಕೂರಬಹುದಾದ ಕಲ್ಯಾಣ ಮಂಟಪ ಹಾಗೂ 250 ಮಂದಿ ಸಾಮರ್ಥ್ಯದ ಊಟದ ಹಾಲ್, 13 ಕೊಠಡಿಗಳನ್ನು, 12 ವಸತಿ ನಿಲಯಗಳನ್ನು ನಿರ್ಮಿಸುತ್ತಿದೆ.
ಅಲ್ಲದೆ ಕರ್ನಾಟಕ ಭವನದ 84 ಕೊಠಡಿಗಳ ನವೀಕರಣ ಕಾರ್ಯ ನಡೆಯುತ್ತಿದೆ. ಒಟ್ಟಾರೆ 220 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಮುಜರಾಯಿ ಇಲಾಖೆಯು ಅನುದಾನ ನೀಡುತ್ತಿದ್ದು, ಈ ಕಾಮಗಾರಿಯನ್ನು ಟಿಟಿಡಿ ದೇವಸ್ಥಾನ ಟ್ರಸ್ಟ್ ನಡೆಸುತ್ತಿದೆ. ಸದ್ಯ ಕರ್ನಾಟಕದ ಯಾತ್ರಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ಕೇವಲ 24 ಕೊಠಡಿಗಳಷ್ಟೇ ಲಭ್ಯವಿದೆ.
ಈಗಾಗಲೇ ಕರ್ನಾಟಕ ಭವನದ ಹಳೆಯ 84 ಕೊಠಡಿಗಳ ನವೀಕರಣ ಕಾಮಗಾರಿ ಪೈಕಿ 24 ಕೊಠಡಿಗಳು ಪೂರ್ಣವಾಗಿದ್ದು, 29 ರೂಮುಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಉಳಿದ 29 ಕೊಠಡಿಗಳು ಸೇರಿದಂತೆ 84 ರೂಮ್ ಗಳ ರಿನೋವೇಶನ್ ಪೂರ್ಣಗೊಳ್ಳಲಿದೆ. ಅದೇ ರೀತಿ ಎರಡನೇ ಬ್ಲಾಕ್ ನಲ್ಲಿನ 110 ಕೊಠಡಿಗಳ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿದೆ. ಪ್ರಸ್ತುತ ಈ ಬ್ಲಾಕ್ ನಲ್ಲಿ ಪ್ಲಂಬಿಂಗ್ ಕಾರ್ಯ, ಪೈಂಟಿಂಗ್ ಹಾಗೂ ಪೀಠೋಪಕರಣಗಳ ಜೋಡಣಾ ಕಾರ್ಯಗಳು ನಡೆಯುತ್ತಿವೆ.
ಒಟ್ಟಾರೆ ಆಗಸ್ಟ್ ವೇಳೆಗೆ ರಾಜ್ಯದ ಭಕ್ತರಿಗೆ 194 ಸುಸಜ್ಜಿತ ಕೊಠಡಿಗಳು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.