ಯಲ್ಲಾಪುರ: ಮದುವೆಗೆ ಹೆಣ್ಣು ಸಿಗದೆ ಮನನೊಂದ ಯುವಕ ಸಾವಿಗೆ ಶರಣು

ಕಾರವಾರ, ಜೂನ್ 29: ಗುಡ್ಡಗಾಡು ಪ್ರದೇಶ ಹಾಗೂ ಕೃಷಿಯನ್ನೇ ಅವಲಂಬಿಸಿರುವ ಉತ್ತರ ಕನ್ನಡ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಆರೋಪ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ ಇಂತಹ ವಿಚಾರದಿಂದಲೇ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರದ ತೇಲಂಗಾರದ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಯಲ್ಲಾಪುರದ ತೇಲಂಗಾರ ಕಿರಗಾರಿ ಮನೆಯಲ್ಲಿ ಕೃಷಿ ಮಾಡಿಕೊಂಡಿದ್ದು, ಮದುವೆಯಾಗಲು ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದಾರೆ.
ಸಾಕಷ್ಟು ಹುಡುಕಾಟ ನಡೆಸಿದರು ಕೂಡ ಎಲ್ಲಿಯೂ ಸಂಬಂಧ ಹೊಂದಿಕೆಯಾಗಿರಲಿಲ್ಲ. ಅಲ್ಲದೇ ಮದುವೆಗಾಗಿ ಸಂಬಂಧಿಕರು, ಬ್ರೋಕರ್‌ಗಳ ಬಳಿ ಹೆಣ್ಣು ಹುಡುಕಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದರು. ಅದರಿಂದಲೂ ಸಾಧ್ಯವಾಗಿರಲಿಲ್ಲ. ಇದರಿಂದ ನಾಗರಾಜ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ ಎನ್ನಲಾಗಿದೆ.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿದ್ದ ಗಣಪತಿ ಗಾಂವ್ಕರ್ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಇನ್ನು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಒಂದೇ ಕುಟುಂಬ ಮೂವರ ಮೃತದೇಹ ಪತ್ತೆ: ಹೆಂಡತಿ ಮಗನ ಕೊಂದು ಉದ್ಯಮಿ ಆತ್ಮಹತ್ಯೆ ಶಂಕೆ!
ಕಾರವಾರ: ಒಂದೇ ಕುಟುಂಬದ ಮೂವರ ಮೃತದೇಹ ಕಾರವಾರದ ದೇವಭಾಗ ಹಾಗೂ ಗೋವಾದ ಕುಕ್ಕಳಿಪಾಡಿ ಬಳಿ ಪತ್ತೆಯಾಗಿದ್ದು, ಹೆಂಡತಿ ಮಗನ ಕೊಂದು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾರವಾರದ ಗೋಪಿಶಿಟ್ಟಾ ಮೂಲದ ಶ್ಯಾಮ ಪಾಟೀಲ್(45), ಜ್ಯೋತಿ (38) ಇವರ ಮಗ ಧಕ್ಷ (12) ಮೃತಪಟ್ಟವರಾಗಿದ್ದಾರೆ. ಜ್ಯೋತಿ ಹಾಗೂ ಧಕ್ಷ ಅವರ ಮೃತ ದೇಹ ದೇವಭಾಗ ಬೀಚ್ ಬಳಿ ಪತ್ತೆಯಾಗಿದೆ. ಇನ್ನು ಶ್ಯಾಮ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶ್ಯಾಮ್ ಪಾಟೀಲ್ ಕಂಪನಿಗಳಿಗೆ ಕಾರ್ಮಿಕರನ್ನು ಪೂರೈಕೆ ಮಾಡುತ್ತಿದ್ದರು. ಹೆಂಡತಿ ಮಗನನ್ನು ಕಾರವಾರದ ಕಾಳಿ ನದಿಯಲ್ಲಿ ತಳ್ಳಿ, ತಾವು ಕಾರವಾರದಿಂದ 60 ಕಿ.ಮೀ ದೂರದ ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗಲು ಹುಡುಗಿ ಸಿಗದ್ದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ
ಹಾವೇರಿ: ಮದುವೆಯಾಗಲು ಹುಡುಗಿ ಸಿಗದೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ಶುಕ್ರವಾರ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿತ್ತು. ಮಂಜುನಾಥ ನಾಗನೂರು(36) ಮೃತ ರೈತ ಎಂದು ಗುರುತಿಸಲಾಗಿದೆ.
ಮಂಜುನಾಥ ನಾಗನೂರು ಕಳೆದ 8 ವರ್ಷಗಳಿಂದ ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದರು. ಆದರೆ, ಈವರೆಗೂ ಅವರಿಗೆ ಮದುವೆ ನಿಶ್ಚಯವಾಗಿರಲಿಲ್ಲ. ಮದುವೆಯಾಗಲು ಹೆಣ್ಣು ಸಿಗದೆ ತೀವ್ರವಾಗಿ ಮನನೊಂದಿದ್ದ ಮಂಜುನಾಥ್ ನನ್ನಿಂದ ತಂದೆ-ತಾಯಿಗೆ ತುಂಬಾ ತೊಂದರೆಯಾಗುತ್ತಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ತಮ್ಮ ಜಮೀನಿನಲ್ಲಿ ವಿಷ ಕುಡಿದು ಸಾವಿಗೆ ಶರಣಾಗಿದ್ದರು. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.