ಗೃಹಲಕ್ಷ್ಮಿ ₹2000 | 14ರಿಂದ ‘ಗೃಹಲಕ್ಷ್ಮಿ’ಗೆ ಅರ್ಜಿ: ಸಚಿವೆ ಹೆಬ್ಬಾಳಕರ

ಬೆಳಗಾವಿ: ‘ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 14ರಿಂದ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜುಲೈ 3 ಅಥವಾ 4ರಂದು ಈ ಬಗ್ಗೆ ನಾವು ಘೋಷಿಸಲಾಗುವುದು. ಆಗಸ್ಟ್ ತಿಂಗಳಿಂದ ಮನೆ ಯಜಮಾನಿ ಖಾತೆಗೆ ₹2,000 ಹಾಕುತ್ತೇವೆ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಸುಭದ್ರ ಸರ್ಕಾರ, ಸಮೃದ್ಧ ಕರ್ನಾಟಕವೇ ನಮ್ಮ ಗುರಿ’ ಎಂದರು.
‘ಕಾಂಗ್ರೆಸ್ ಸರ್ಕಾರದಿಂದ ವೈಎಸ್‌ಟಿ ಸಂಗ್ರಹ’ ಎಂಬ ಶಾಸಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವೆ, ‘ಕುಮಾರಸ್ವಾಮಿ ಕೂಡ ಸರ್ಕಾರ ನಡೆಸಿದ ಅನುಭವ ಇರುವವರು. ರಾಜಕೀಯ ಮುತ್ಸದ್ಧಿ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಐದು ದಿನ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಈಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ತಪ್ಪಾಗುತ್ತದೆ’ ಎಂದು ಹೇಳಿದರು.
‘ವಿರೋಧ ಪಕ್ಷಗಳು ಹತಾಶೆ ಭಾವನೆಯಿಂದಲೇ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ನಾನು ಹೇಳಲಾರೆ. ಅದರೆ, ಇದು ಮಾತನಾಡುವ ಕಾಲವಲ್ಲ. ನಮಗೆ ಜನ ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡಲು ಅವಕಾಶ ಕೊಡಿ. ಅನಗತ್ಯ ಟೀಕೆಗಳಿಂದ ಏನೂ ಪ್ರಯೋಜನವಿಲ್ಲ. ಮಾಡುವ ಕೆಲಸದಲ್ಲಿ ಅಡ್ಡಗಾಲು ಹಾಕಬಾರದು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಅಧಿವೇಶನದಲ್ಲಿ ಸರ್ಕಾದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಹೋರಾಟ ಮಾಡುವುದು ಅವರ ಹಕ್ಕು. ನಾನು ಅವರ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ. ಆದರೆ, ಒಂದು ಸಲಹೆ ನೀಡುತ್ತೇನೆ. ಮೊದಲು ಅವರು ತಮ್ಮ ಪಕ್ಷದಲ್ಲಿರುವ ಆಂತರಿಕ ಹೋರಾಟ ಮುಗಿಸಲಿ. ನಂತರ ಸರ್ಕಾರದ ಬಗ್ಗೆ ಯೋಚಿಸಲಿ’ ಎಂದು ಹೇಳಿದರು.