ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ: ನಾಲ್ವರ ಬಂಧನ

ಸಹರಾನ್ಪುರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಹರಿಯಾಣ ವಿಶೇಷ ಕಾರ್ಯಪಡೆಯ ಅಂಬಾಲಾ ಘಟಕವು ಬಂಧಿಸಿದೆ.
ಅಂಬಾಲಾದ ಶಹಜಾದ್‌ಪುರ ಪ್ರದೇಶದ ಧಾಬಾ ಬಳಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಂಬಾಲಾ ಎಸ್‌ಟಿಎಫ್ ಘಟಕದ ಉಪ ಪೊಲೀಸ್ ಅಧೀಕ್ಷಕ ಅಮನ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಕಾಸ್, ಪ್ರಶಾಂತ್ ಮತ್ತು ಲೋವಿಶ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಯುಪಿಯ ಸಹರಾನ್‌ಪುರದವರು. ನಾಲ್ಕನೇ ಆರೋಪಿ ವಿಕಾಸ್ ಹರಿಯಾಣದ ಕರ್ನಾಲ್ ಮೂಲದವ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಯುಪಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಆರೋಪಿಗಳು ಅಂಬಾಲಾದ ಅಡಗುತಾಣದಲ್ಲಿ ತಲೆಮರೆಸಿಕೊಂಡಿದ್ದರೋ ಇಲ್ಲವೋ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಬಂಧನದ ವೇಳೆ ಅವರ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ ಎಂದು ಡಿಎಸ್‌ಪಿ ಅಮನ್ ಕುಮಾರ್ ತಿಳಿಸಿದ್ದಾರೆ.