ಈ ಬಾರಿ ಮುಂಗಾರು ಮಳೆ ಕೊರತೆ ಹೊಲಗಳ ಮೇಲೆ ಮಾತ್ರವಲ್ಲ; ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಬೆಳಗಾವಿ | ದಿನಸಿ ದುಬಾರಿ; ಗ್ರಾಹಕರ ಜೇಬಿಗೆ ಕತ್ತರಿ

ಬೆಳಗಾವಿ: ಈ ಬಾರಿ ಮುಂಗಾರು ಮಳೆ ಕೊರತೆ ಹೊಲಗಳ ಮೇಲೆ ಮಾತ್ರವಲ್ಲ; ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಕಳೆದೊಂದು ವಾರದಿಂದ ಮಾರುಟ್ಟೆಯಲ್ಲಿ ಪ್ರತಿಯೊಂದು ತರಕಾರಿ, ಕಾಳು, ದಿನಸಿ ಪದಾರ್ಥಗಳ ಬೆಲೆ ಗಗನಮುಖಿಯಾಗಿದೆ. ಅದರಲ್ಲೂ ಟೊಮೆಟೊ ದರವಂತೂ ಸಾಮಾನ್ಯ ವರ್ಗದ ಕೈಗೆ ನಿಲುಕದಷ್ಟು ಏರಿಕೆ ಕಂಡಿದೆ. ಒಂದೆಡೆ ಮಳೆ ಕೊರತೆ, ಇನ್ನೊಂದೆಡೆ ದುಬಾರಿ ದರ; ಎರಡೂ ಬರೆಗಳು ಜನಸಾಮಾನ್ಯರಿಗೆ ಬೀಳುತ್ತಿವೆ.
ಬರಗಾಲದ ಛಾಯೆ ಎಲ್ಲೆಡೆ ಆವರಿಸಿದ್ದರಿಂದ ನಗರದ ಮಾರುಕಟ್ಟೆಗೆ ತರಕಾರಿಗಳ ಆವಕದ ಪ್ರಮಾಣ ಇಳಿಮುಖವಾಗಿದೆ. ಬಹುತೇಕ ತರಕಾರಿಗಳ ದರ ಏರಿಕೆಯಾಗಲು ಇದೇ ಕಾರಣ. ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಹದವಾದ ಮಳೆ ಬೀಳುವುದು ಜಿಲ್ಲೆಯ ಹವಾಗುಣದ ಲಕ್ಷಣ. ಆದರೆ, ಈ ಬಾರಿ ವಾಡಿಕೆ ಮಳೆಗಿಂತ ತೀರ ಕಡಿಮೆಯಾಗಿದೆ. ಜತೆಗೆ, ಪೂರ್ವ ಮುಂಗಾರು ಕೂಡ ಕೈಕೊಟ್ಟಿದೆ. ಹೀಗಾಗಿ, ತೋಟಗಳಲ್ಲಿನ ಹಸಿ ಒಣಗಿದೆ. ತರಕಾರಿ ಬೆಳೆ ಸಹಜವಾಗಿಯೇ ಕುಸಿತ ಕಂಡಿದೆ.
ಟೊಮೆಟೊ, ಬೀನ್ಸ್, ಬದನೆಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಪೂರೈಕೆ ಕಡಿಮೆಯಾಗಿದೆ. ತಾಲ್ಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಈ ತರಕಾರಿಗಳ ಬೆಳೆ ಬಹುತೇಕ ಕಡಿಮೆಯಾಗಿದೆ. ಹೀಗಾಗಿ, ಬೇರೆ ಕಡೆಗಳಿಂದ ಅಮದು ಮಾಡಿಕೊಳ್ಳಲಾಗುತ್ತಿದೆ.
ಈರುಳ್ಳಿ, ಆಲೂಗಡ್ಡೆಯನ್ನು ಮಹಾರಾಷ್ಟ್ರದ ಗಡಿ ಗ್ರಾಮಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದೆಲ್ಲ ತರಕಾರಿಗಳನ್ನು ಜಿಲ್ಲೆಯಲ್ಲೂ ಯಥೇಚ್ಛವಾಗಿ ಬೆಳೆಯುತ್ತಾರೆ. ಆದರೆ, ಈ ಬಾರಿ ಇಳುವರಿಯೂ ಕುಸಿದ ಕಾರಣ, ಪೂರೈಕೆ ಪ್ರಮಾಣ ಕಡಿಮೆಯಾಗಿದೆ.
ಟೊಮೆಟೊ ದರ ಕನಿಷ್ಠ ₹80: ತರಕಾರಿ ಮಾರುಕಟ್ಟೆಗೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಟೊಮೆಟೊ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಮಹಾರಾಷ್ಟ್ರದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ರಫ್ತು ಮಾಡುವವರೇ ದರ ಹೆಚ್ಚಳ ಮಾಡಿದ್ದರಿಂದ ಚಿಲ್ಲರೆ ವ್ಯಾಪಾರಿಗಳು ಕೂಡ ದರ ಏರಿಸಿದ್ದಾರೆ.
ಎರಡು ವಾರದ ಹಿಂದೆ ₹15ರಿಂದ ₹20ಕ್ಕೆ ಒಂದು ಕೆ.ಜಿ ಇದ್ದ ಟೊಮೆಟೊ ದರ ಈಗ ₹80ಕ್ಕೆ ಏರಿದೆ!
ಅದರಲ್ಲೂ ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳು ಬೆಳಿಗ್ಗೆ ₹90ರಿಂದ ₹100 ದರ ಹೇಳುತ್ತಾರೆ. ಸಂಜೆ ವೇಳೆಗೆ ₹ 80ಕ್ಕೆ ಕೊಡುತ್ತಾರೆ. ಪೊರೈಕೆ ಕಡಿಮೆಯಾದ್ದರಿಂದ ಎಲ್ಲ ಟೊಮೆಟೊ ಬಿಕರಿಯಾಗುತ್ತದೆ ಎಂಬ ಭರವಸೆ ವ್ಯಾಪಾರಿಗಳದ್ದು.

ಕೊತ್ತಂಬರಿ, ಕರಿಬೇವು, ಮೆಂತ್ಯಪಲ್ಯ, ಸಬ್ಬಸಿಗೆ, ಪುದೀನಾ ಸೇರಿ ಎಲ್ಲ ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ. ಕೊತ್ತಂಬರಿ ಒಂದು ಸಣ್ಣ ಹಿಡಿಗೆ ₹15ರಿಂದ ₹ 20ಕ್ಕೇರಿದೆ. ಈರುಳ್ಳಿ ದರ ₹30ರಿಂದ ₹50ಕ್ಕೆ ಏರಿದೆ. ಉಳಿದ ತರಕಾರಿಗಳ ಬೆಲೆಯೂ ₹5ರಷ್ಟು ಹೆಚ್ಚಾಗಿದೆ.
ಚೌಕಾಶಿಗೆ ಅವಕಾಶವಿಲ್ಲ: ವ್ಯಾಪಾರಿಗಳ ಬಳಿ ಚೌಕಾಶಿ ಮಾಡಿ ಒಂದೆರಡು ರೂಪಾಯಿ ಕಡಿಮೆ ಮಾಡಿಯೇ ತರಕಾರಿ, ಕಾಳು ಖರೀದಿ ಮಾಡುವುದು ಮಹಿಳೆಯರ ರೂಢಿ. ಆದರೆ, ಈಗ ಚೌಕಾಶಿ ಅವಕಾಶವೇ ಇಲ್ಲದಂತಾಗಿದೆ.
‘ಹಣ್ಣು, ದಿನಸಿಗಳೂ ದುಬಾರಿಯಾಗಿದೆ. ಎರಡು ವಾರಗಳ ಹಿಂದೆ ಇದ್ದ ಯಾವ ದಿನಸಿ ದರವೂ ಈಗ ಇಲ್ಲ. ದರ ಏಕೆ ಹೆಚ್ಚಳವಾಗಿದೆ ಎಂದು ಚೌಕಾಶಿ ಮಾಡಿದರೆ ವರ್ತಕರಿಗೆ ಬೇಕಾಬಿಟ್ಟಿ ಉತ್ತರ ನೀಡುತ್ತಾರೆ. ಪೂರೈಸುವವರೇ ದರ ಹೆಚ್ಚಿಸಿದ್ದಾರೆ ಎನ್ನುತ್ತಾರೆ’ ಎನ್ನುವುದು ಗೃಹಿಣಿ ಮಹೇಶ್ವರಿ ಪಟ್ಟಣ ಅವರ ಹೇಳಿಕೆ.