Tomato Price: 140 ರೂಪಾಯಿಗೆ ತಲುಪಿದ ಟೊಮ್ಯಾಟೋ ಬೆಲೆ

ನವದೆಹಲಿ, ಜುಲೈ 3: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಟೊಮ್ಯಾಟೋ ಬೆಲೆ ಹೊಸ ದಾಖಲೆ ಬರೆದಿದೆ. ಸೋಮವಾರ ಒಂದು ಕೆ.ಜಿ. ಟೊಮ್ಯಾಟೋ ಬೆಲೆ 140 ರೂಪಾಯಿಗಳಿಗೆ ಏರಿಕೆಯಾಗಿದೆ. ಮಳೆಯ ಕಾರಣದಿಂದ ರಾಷ್ಟ್ರರಾಜಧಾನಿಗೆ ಟೊಮ್ಯಾಟೋ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದ್ದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ.
ಏಷ್ಯಾದ ಅತಿದೊಡ್ಡ ಸಗಟು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಾಗಿರುವ ಇಲ್ಲಿನ ಆಜಾದ್‌ಪುರ ಮಂಡಿಯಲ್ಲಿ ಟೊಮೆಟೊ ಸಗಟು ಬೆಲೆ ಸೋಮವಾರದ ಗುಣಮಟ್ಟವನ್ನು ಅವಲಂಬಿಸಿ ಕೆಜಿಗೆ 60-120 ರೂಪಾಯಿಗೆ ತಲುಪಿದೆ. ಭಾನುವಾರ ಮದರ್ ಡೈರಿಯ ಸಫಲ್‌ನಲ್ಲಿ ಟೊಮ್ಯಾಟೋ ಕೆ.ಜಿ.ಗೆ 99 ರೂಪಾಯಿಗಳಂತೆ ಮಾರಾಟ ಮಾಡಲಾಗಿತ್ತು. ಬಿಗ್ ಬಾಸ್ಕೆಟ್‌ನಲ್ಲಿ ಟೊಮೆಟೊ ಹೈಬ್ರಿಡ್‌ಗೆ ಕೆಜಿಗೆ 140 ರೂ. ಮತ್ತು ಸ್ಥಳೀಯ ತಳಿಗೆ ಕೆ.ಜಿಗೆ 105-110 ರೂಪಾಯಿಯಂತೆ ಮಾರಾಟ ಮಾಡಲಾಗಿದೆ.
ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಕಡಿಮೆಯಾದ ಕಾರಣ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಮಳೆಯಿಂದಾಗಿ ದೇಶದ ಹಲವು ಭಾಗಗಳಿಂದ ದೆಹಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಟೊಮ್ಯಾಟೋ ಪ್ರಮಾಣ ಕಡಿಮೆಯಾಗಿದೆ ಎಂದು ಆಜಾದ್‌ಪುರ ಟೊಮ್ಯಾಟೋ ಸಂಘದ ಅಧ್ಯಕ್ಷ ಅಶೋಕ್ ಕೌಶಿಕ್ ಪಿಟಿಐಗೆ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಭಾರಿ ಮಳೆ
ದೆಹಲಿಯ ಅಕ್ಕಪಕ್ಕದ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಟೊಮ್ಯಾಟೋ ಪ್ರಮಾಣ ಕಡಿಮೆಯಾಗಿದೆ. ಮಳೆಯಿಂದಾಗಿ ಇಲ್ಲಿ ಬೆಳೆ ನಾಶವಾಗಿದ್ದು, ಇಳುವರಿ ಕೂಡ ಕುಸಿತವಾಗಿದೆ. ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಸದ್ಯ ಹಿಮಾಚಲ ಪ್ರದೇಶದಿಂದ ಹೆಚ್ಚಿನ ಟೊಮ್ಯಾಟೋ ಪೂರೈಕೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ಸಾಗಾಣಿಕೆ ಮೇಲೆ ಪರಿಣಾಮ ಬೀರಲಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಉತ್ಪಾದನಾ ಕೇಂದ್ರಗಳಿಂದ ವರ್ತಕರಿಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ, ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರೆ, ಕರ್ನಾಟಕದಲ್ಲಿ ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೋ ನಾಟಿ ಮಾಡಿಲ್ಲ. ಇನ್ನು ಟೊಮ್ಯಾಟೋ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಎಲೆಮುರುಕು ರೋಗದಿಂದ ಇಳುವರಿ ಭಾರಿ ಕಡಿಮೆಯಾಗಿದೆ.
ಇನ್ನೂ 15 ದಿನ ಬೆಲೆ ಕಡಿಮೆಯಾಗಲ್ಲ
“25 ಕೆಜಿಯ ಒಂದು ಕ್ರೇಟ್ ಟೊಮ್ಯಾಟೋ ರೂ 2,400 ರಿಂದ 3,000 ರವರೆಗೆ ಮಾರಾಟವಾಗಿದೆ. ಉತ್ಪಾದನಾ ಕೇಂದ್ರಗಳಲ್ಲಿ ಪ್ರತಿ ಕೆಜಿ ಟೊಮೆಟೊ ದರವು ಕೆಜಿಗೆ ರೂ 100-120 ಆಗಿದೆ. ಅದಕ್ಕಿಂತ ಹೆಚ್ಚಿನ ದರ ಕೊಟ್ಟು ವ್ಯಾಪಾರಿಗಳು ದೆಹಲಿಗೆ ತರಲು ಸಾಧ್ಯವಿಲ್ಲ, ಇನ್ನೂ ಬೆಲೆ ಹೆಚ್ಚಾದರೆ ಮಾರಾಟ ಕುಂಠಿತವಾಗಲಿದೆ” ಎಂದು ಹೇಳಿದರು.
ಮುಂದಿನ 15 ದಿನಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಮಳೆಯ ಪರಿಸ್ಥಿತಿ ಸುಧಾರಿಸಿದರೆ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಟೊಮೆಟೊ ಪೂರೈಕೆ ಹೆಚ್ಚಾಗುವ ನಿರೀಕ್ಷೆಯಿದೆ, ಅಲ್ಲಿಯವರೆಗೆ ಇದೇ ಬೆಲೆ ಇರಲಿದೆ ಎಂದು ಅವರು ಹೇಳಿದರು.
ಕೌಶಿಕ್ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಜಾದ್‌ಪುರದ ಸದಸ್ಯರೂ ಆಗಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿಯೂ ಟೊಮೆಟೊ ಬೆಲೆ ಹೆಚ್ಚಾಗಿದೆ.
ದೆಹಲಿ ಮಾತ್ರವಲ್ಲ ಬಹುತೇಕ ರಾಜ್ಯಗಳಲ್ಲಿ ಟೊಮ್ಯಾಟೋ ದರ 100 ರೂಗಳ ಗಡಿ ದಾಟಿದೆ. ಕೆಲವು ಕಡೆಗಳಲ್ಲಿ ಪ್ರತಿ ಕೆ.ಜಿ.ಗೆ 110-120 ರೂಪಾಯಿ ಇದ್ದರೆ, ಕೆಲವು ರಾಜ್ಯಗಳಲ್ಲಿ ಪ್ರತಿ ಕೆ.ಜಿ.ಗೆ 80-100 ರೂಪಾಯಿ ಆಸುಪಾಸಿನಲ್ಲಿದೆ.