
ನವದೆಹಲಿ, ಜುಲೈ 06: ಎನ್‌ಸಿಪಿ ಪಕ್ಷದ ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯದ ಬೆಂಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡಿದೆ. ಈ ಎರಡು ಗುಂಪುಗಳ ನಡುವಿನ ಅಧಿಕಾರದ ಸಂಘರ್ಷವು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಜಿತ್ ಪವಾರ್ ಹಾಗೂ ಅವರ ಚಿಕ್ಕಪ್ಪ ಶರದ್ ಪವಾರ್ ಅವರು ಪಕ್ಷದ ಮೇಲೆ ಹಿಡಿತ ಸಾಧಿಸುವ ಹೋಟದಲ್ಲಿ ನಿರತರಾಗಿದ್ದಾರೆ.
ಕುತೂಹಲಕರವೆಂದರೆ, ಈ ಸಂಘರ್ಷದ ಬೆಂಕಿ ಮುಂಬೈನಿಂದ ದೆಹಲಿಗೆ ಹರಡಿಕೊಂಡಿದೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರು ಇಂದು ದೆಹಲಿಯಲ್ಲಿ ಪಕ್ಷದ ನಾಯಕರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಅಜಿತ್ ಪವಾರ್ ಅವರನ್ನು ‘ಕಟ್ಟಪ್ಪ’ ಹಾಗೂ ಶರದ್ ಪವಾರ್ ಅವರನ್ನು ‘ಬಾಹುಬಲಿ’ ಎಂದು ಬಿಂಬಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಎನ್‌ಸಿಪಿ ವಿದ್ಯಾರ್ಥಿ ಘಟಕವಾಗಿರುವ ರಾಷ್ಟ್ರವಾದಿ ವಿದ್ಯಾರ್ಥಿ ಕಾಂಗ್ರೆಸ್ ದೆಹಲಿಯ ಕಚೇರಿಯ ಹೊರಗೆ ಪೋಸ್ಟರ್ ಅನ್ನು ಹಾಕಿದೆ.
ಎನ್‌ಡಿಎಗೆ ಸೇರ್ಪಡೆಗೊಂಡಿರುವ ಅಜಿತ್ ಪವಾರ್ ಅವರು ಬಾಹುಬಲಿ ಚಿತ್ರದ ‘ಕಟ್ಟಪ್ಪ’ ಆಗಿ ಕಾಣಿಸಿಕೊಂಡಿದ್ದಾರೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರನ್ನು ‘ಬಾಹುಬಲಿ’ ಎಂದು ಬಿಂಬಿಸಲಾಗಿದೆ. ಪೋಸ್ಟರ್‌ಗೆ ‘ಗದ್ದಾರ್’ (ದೇಶದ್ರೋಹಿ) ಎಂಬ ಶೀರ್ಷಿಕೆ ನೀಡಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ಪೋಸ್ಟರ್ ಅನ್ನು ಟ್ವೀಟ್ ಮಾಡಿದೆ.
ಎನ್‌ಸಿಪಿಯ ಗುಂಪು ಕಲಹವೀಗ ಭಾರತದ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಅಜಿತ್ ಪವಾರ್ ಬಣವು ಸಂಖ್ಯೆಬಲವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೆಸರು ಹಾಗೂ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.
ತನಗೆ 40 ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳ ಬೆಂಬಲವಿದೆ ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ. ಅಜಿತ್ ಪವಾರ್ ಬಣಕ್ಕೆ ನಿಷ್ಠರಾಗಿರುವ ಶಾಸಕರು ಮುಂಬೈನ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಬಿಜೆಪಿ-ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿರುವ ಅಜಿತ್ ಪವಾರ್ ಬಣ ಮುಂಬೈನ ಬಾಂದ್ರಾದಲ್ಲಿ ಬುಧವಾರ ತಮ್ಮ ಬಲವನ್ನು ಸಾಬೀತುಪಡಿಸಿತು. ಎನ್‌ಸಿಪಿಯ 53 ಶಾಸಕರ ಪೈಕಿ 32 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಶರದ್ ಪವಾರ್‌ಗೆ ರಾಹುಲ್ ಬೆಂಬಲ
ಶರದ್ ಪವಾರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ರಾಹುಲ್ ಗಾಂಧಿ ಅವರು ಎನ್‌ಸಿಪಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಎಲ್ಲ ವಿರೋಧ ಪಕ್ಷಗಳು ಸಹ ಎನ್‌ಸಿಪಿ ಜೊತೆ ನಿಂತಿವೆ ಎಂದು ಶರದ್ ಪವಾರ್ ಬಣ ಹೇಳಿಕೊಂಡಿದೆ.
ಇದೇ ವೇಳೆ, ಅಜಿತ್ ಪವಾರ್ ಅವರು ನರೇಂದ್ರ ರಾಣೆ ಅವರನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಂಬೈನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನರೇಂದ್ರ ರಾಣೆ ಅವರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಅಜಿತ್ ಪವಾರ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಅಜಿತ್ ಪವಾರ್ ಅವರು ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಡಬಲ್ ಎಂಜಿನ್ ಸರ್ಕಾರದ ಲಾಭಗಳನ್ನು ಅವರು ಅವಲೋಕಿಸಿದ್ದಾರೆ’ ಎಂದು ಹೇಳಿದ್ದಾರೆ.