fbpx
Karnataka News

ಪ್ರಧಾನಿ ವಿರುದ್ಧ ನಿಂದನಾತ್ಮಕ ಪದಗಳು ಅವಹೇಳನಕಾರಿ, ದೇಶದ್ರೋಹವಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು, : ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ನಿಂದನಾತ್ಮಕ ಪದ ಬಳಸಿರುವುದು ಅವಹೇಳನಕಾರಿ ಹಾಗೂ ಬೇಜವಾಬ್ದಾರಿಯುತ ನಡೆ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠ​ ಇದನ್ನು ದೇಶದ್ರೋಹ ಎನ್ನಲಾಗುವುದಿಲ್ಲ ಎಂದು ತೀರ್ಪು ನೀಡಿದೆ. ಬೀದರ್ ಶಾಹೀನ್ ಶಾಲೆಯ ಶಾಲಾ ಆಡಳಿತ ಮಂಡಳಿ ವಿರುದ್ಧದ ದೇಶದ್ರೋಹ ಪ್ರಕರಣವನ್ನು ರದ್ದುಪಡಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ.

ಬೀದರ್‌ನ ಶಾಹೀನ್ ಶಾಲೆಯ ಎಲ್ಲಾ ಮ್ಯಾನೇಜ್‌ಮೆಂಟ್ ವ್ಯಕ್ತಿಗಳಾದ ಅಲ್ಲಾವುದ್ದೀನ್, ಅಬ್ದುಲ್ ಖಲೀಕ್, ಮಹಮ್ಮದ್ ಬಿಲಾಲ್ ಇನಾಮದಾರ್ ಮತ್ತು ಮಹಮ್ಮದ್ ಮೆಹತಾಬ್ ವಿರುದ್ಧ ಬೀದರ್ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ರದ್ದುಗೊಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 (ಎ) (ಧಾರ್ಮಿಕ ಗುಂಪುಗಳ ನಡುವೆ ಅಸಂಗತತೆಯನ್ನು ಉಂಟುಮಾಡುವುದು) ಅಂಶಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಪ್ರಧಾನಿಯನ್ನು ಪಾದರಕ್ಷೆಯಿಂದ ಹೊಡೆಯಬೇಕು ಎಂಬ ನಿಂದನೆಯ ಮಾತುಗಳು ಅವಹೇಳನಕಾರಿ ಮಾತ್ರವಲ್ಲ ಬೇಜವಾಬ್ದಾರಿಯೂ ಆಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಸರ್ಕಾರದ ನೀತಿಯ ರಚನಾತ್ಮಕ ಟೀಕೆ ಸ್ವೀಕಾರಾರ್ಹ, ಆದರೆ ನೀತಿ ನಿರ್ಧಾರವನ್ನು ತೆಗೆದುಕೊಂಡಿರುವ ಸಾಂವಿಧಾನಿಕ ಸ್ಥಾನದಲ್ಲಿರುವವರನ್ನು ಅವಮಾನಿಸಬಾರದು. ಇದಕ್ಕೆ ಕೆಲವು ವರ್ಗದ ಜನರು ಆಕ್ಷೇಪಣೆಯನ್ನು ಹೊಂದಿರಬಹುದು” ಎಂದು ನ್ಯಾಯಮೂರ್ತಿ ಚಂದನಗೌಡರ್ ತಮ್ಮ ತೀರ್ಪಿನಲ್ಲಿ ಹೇಳಿದರು.

ಬೀದರ್‌ನ ಶಾಹೀನ್ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಟಕವು ಸರ್ಕಾರದ ವಿವಿಧ ಕಾಯ್ದೆಗಳನ್ನು ಟೀಕಿಸಿದೆ ಎಂದು ಆರೋಪಿಸಲಾಗಿದೆ. ಜೊತೆಗೆ “ಇಂತಹ ಕಾನೂನುಗಳನ್ನು ಜಾರಿಗೊಳಿಸಿದರೆ, ಮುಸ್ಲಿಮರು ದೇಶವನ್ನು ತೊರೆಯಬೇಕಾಗುತ್ತದೆ” ಎಂದು ನಾಟಕದಲ್ಲಿ ಹೇಳಲಾಗಿದೆ ಎಂದು ಆರೋಪಿಸಲಾಗಿದೆ.

“ಶಾಲೆಯ ಆವರಣದಲ್ಲಿ ನಾಟಕವನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಹಿಂಸಾಚಾರವನ್ನು ಆಶ್ರಯಿಸಲು ಅಥವಾ ಸಾರ್ವಜನಿಕ ಅಸ್ವಸ್ಥತೆಯನ್ನು ಸೃಷ್ಟಿಸಲು ಮಕ್ಕಳನ್ನು ಪ್ರಚೋದಿಸುವ ಯಾವುದೇ ಪದಗಳಿಲ್ಲ. ಇದಲ್ಲದೆ ಆರೋಪಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾಟಕವನ್ನು ಅಪ್‌ಲೋಡ್ ಮಾಡಿದಾಗ ನಾಟಕದ ಬಗ್ಗೆ ಸಾರ್ವಜನಿಕರಿಗೆ ತಿಳಿಯಿತು” ಎಂದು ಹೈಕೋರ್ಟ್ ಹೇಳಿದೆ.

“ಆದ್ದರಿಂದ, ಇಲ್ಲಿ ಅರ್ಜಿದಾರರು ಸರ್ಕಾರದ ವಿರುದ್ಧ ಹಿಂಸಾಚಾರ ಉಂಟು ಮಾಡಲು ಜನರನ್ನು ಪ್ರಚೋದಿಸುವ ಉದ್ದೇಶದಿಂದ ಅಥವಾ ಸಾರ್ವಜನಿಕ ಅವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ ನಾಟಕವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಲಾಗುವುದಿ. ಹೀಗಾಗಿ ಸೆಕ್ಷನ್ 124 ಎ (ದೇಶದ್ರೋಹ) ಮತ್ತು ಸೆಕ್ಷನ್ 505 (2) ರ ಅಡಿಯಲ್ಲಿ ಅಪರಾಧಕ್ಕಾಗಿ ಎಫ್‌ಐಆರ್ ನೋಂದಣಿಯನ್ನು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಜನವರಿ 21, 2020 ರಂದು ಶಾಹೀನ್ ಶಾಲೆಯ 4, 5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಾಟಕವನ್ನು ಪ್ರದರ್ಶಿಸಿದ ನಂತರ ಶಾಲಾ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಎಫ್‌ಐಆರ್ ದಾಖಲಿಸಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತ ನೀಲೇಶ್ ರಕ್ಷಾಲಾ ಎಂಬಾತ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಸೆಕ್ಷನ್ 504 (ಉದ್ದೇಶಪೂರ್ವಕವಾಗಿ ಯಾರನ್ನಾದರೂ ಅವಮಾನಿಸುವುದು), 505 (2), 124 ಎ (ದೇಶದ್ರೋಹ) ಮತ್ತು 153 ಎ ಐಪಿಸಿಯ ಸೆಕ್ಷನ್ 34 ರ ಅಡಿಯಲ್ಲಿ ಆರೋಪ ದಾಖಲಿಸಲಾಗಿತ್ತು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸರ್ಕಾರಗಳನ್ನು ಟೀಕಿಸುವುದರಿಂದ ಮಕ್ಕಳನ್ನು ದೂರವಿಡಲು ಶಾಲೆಗಳಿಗೆ ಸಲಹೆಯನ್ನೂ ನೀಡಿತ್ತು. “ಶಿಕ್ಷಣದಲ್ಲಿ ಮಗುವಿನ ಆಸಕ್ತಿಯನ್ನು ಬೆಳೆಸುವಲ್ಲಿ ಆಕರ್ಷಕ ಮತ್ತು ಸೃಜನಶೀಲ ವಿಷಯಗಳ ನಾಟಕ ಯೋಗ್ಯವಾಗಿದೆ ಮತ್ತು ಪ್ರಸ್ತುತ ರಾಜಕೀಯ ವಿಷಯಗಳ ಮೇಲೆ ನಾಟಕವಾಡಿಸುವುದು ಯುವ ಮನಸ್ಸುಗಳನ್ನು ಭ್ರಷ್ಟಗೊಳಿಸುತ್ತದೆ. ಅವರ ಮುಂಬರುವ ಪಠ್ಯಕ್ರಮದ ಶೈಕ್ಷಣಿಕ ಅವಧಿಯಲ್ಲಿ ಅವರಿಗೆ ಅನುಕೂಲವಾಗುವ ಜ್ಞಾನ, ತಂತ್ರಜ್ಞಾನ ಇತ್ಯಾದಿಗಳನ್ನು ಅವರಿಗೆ ನೀಡಬೇಕು” ಎಂದಿತ್ತು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: