ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಬೆಳಗಾವಿ: ಅಪರಿಚಿತ ವ್ಯಕ್ತಿಯೋರ್ವ 12 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ನಗರದ ಹಿಂದವಾಡಿಯ ಮಹಾವೀರ ಗಾರ್ಡನ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಆರೋಪಿ ಬಾಲಕಿಯನ್ನು ಹೊತ್ತೊಯ್ಯುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಬಗ್ಗೆ ದೂರು ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಮಾರುತಿ ನಗರದ ಗಜಾನನ ಪಾಟೀಲ (40) ಖೆಡ್ಡಾಕ್ಕೆ ಬಿದ್ದ ಆರೋಪಿ.
ಆರೋಪಿ ಗಜಾನನ ಟ್ಯೂಶನ್ಗೆ ಹೊರಟಿದ್ದ ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿ ಹೆಗಲ ಎತ್ತಿಕೊಂಡು ಹೋಗಲು ಯತ್ನಿಸಿದ್ದನು. ಆತನ ಕೈಯಿಂದ ತಪ್ಪಿಸಿಕೊಳ್ಳಲು ಬಾಲಕಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಜೋರಾಗಿ ಚೀರಾಟ ಮಾಡಿದ್ದರಿಂದ ಸಮೀಪದ ಗಾರ್ಡನ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಜನರು ನೋಡಿದ್ದಾರೆ. ತಕ್ಷಣ ಅವರು ರಕ್ಷಣೆಗೆ ಧಾವಿಸಿದ್ದು ಅಷ್ಟರಲ್ಲಿ ವ್ಯಕ್ತಿ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, “ಸಂಜೆ 6.35ರ ಸುಮಾರಿಗೆ ಘಟನೆ ನಡೆದಿದೆ. ನಾವೆಲ್ಲ ಮಹಾವೀರ ಗಾರ್ಡನ್‌ನಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಆಗ ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ಅಲ್ಲಿದ್ದವರೆಲ್ಲ ನೋಡಿ ಆತನನ್ನು ಬೆದರಿಸಿದೆವು. ಆರೋಪಿ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾದ. ಘಟನೆಯಿಂದ ಈ ಪ್ರದೇಶದ ಜನರು ತುಂಬಾ ಭಯಭೀತಗೊಂಡಿದ್ದಾರೆ. ತಮ್ಮ ಮಕ್ಕಳಿಗೆ ರಕ್ಷಣೆ ನೀಡಬೇಕು. ಹಾಗಾಗಿ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದ್ದರು. ಬಾಲಕಿಯ ತಾಯಿಯು ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಬಾಲಕಿ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ತಕ್ಷಣ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.