fbpx
Karnataka NewsPoliticsTips

ಕರ್ನಾಟಕದ ಗೃಹ ಮಂತ್ರಿಗಳ ಗಮನಕ್ಕೆ……..

ಕರ್ನಾಟಕದ ಗೃಹ ಮಂತ್ರಿಗಳ ಗಮನಕ್ಕೆ…………..

ಕರ್ನಾಟಕದಲ್ಲಿ ಮೊದಲ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬರಲು ಬಹುಮುಖ್ಯ ಕಾರಣಗಳಲ್ಲಿ ಒಂದು ಆಗ ಆಡಳಿತದಲ್ಲಿದ್ದ ಶ್ರೀ ಆರ್ ಗುಂಡೂರಾವ್ ಅವರ ಸರ್ಕಾರದ ಬಗ್ಗೆ ಇದ್ದ ಗೂಂಡಾ ಸರ್ಕಾರ ಅಥವಾ ರೌಡಿಗಳೇ ಹೆಚ್ಚು ಮೆರೆಯುತ್ತಿದ್ದ ಆಡಳಿತ ಎಂಬ ಮೇಲ್ನೋಟದ ಕೆಟ್ಟ ಸಾರ್ವಜನಿಕ ಅಭಿಪ್ರಾಯದಿಂದ. ಇದಲ್ಲದೆ ಇನ್ನೂ ಅನೇಕ ಒಳ ಕಾರಣಗಳು ಇವೆ. ಆದರೆ ನಗರ ಪ್ರದೇಶದ ಸಾಮಾನ್ಯ ಜನ ಗೂಂಡಾಗಳಿಂದ ಬೇಸತ್ತಿದ್ದರು. ಪೋಲೀಸ್ ಮತ್ತು ಕಾನೂನಿನ ಬಗ್ಗೆ ಹೆದರಿಕೆ ಕಡಿಮೆಯಾಗಿತ್ತು. ರೌಡಿಗಳು ಬಹಿರಂಗವಾಗಿ ಕೊಲೆ ಸುಲಿಗೆ ಬೆದರಿಕೆಯನ್ನು ಹಾಕುತ್ತಿದ್ದರು ಮತ್ತು ಅದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿತ್ತು……

ಅದೇ ಕಾರಣದಿಂದ ಆಗ ನಡೆದ ಚುನಾವಣೆಯಲ್ಲಿ ಗುಂಡೂರಾವ್ ಸೋತರು. ಕೆಲವು ರಾಜಕೀಯ ಕಾರಣಗಳಿಗಾಗಿ ಆಗಿನ ನಿರೀಕ್ಷಿತ ಮುಖ್ಯಮಂತ್ರಿ, ಜನಪ್ರಿಯ ನಾಯಕ ಬಂಗಾರಪ್ಪ ಅವರಿಗೆ ಬದಲಾಗಿ ಆಗ ಸೃಷ್ಟಿಯಾದ ಸನ್ನಿವೇಶದಲ್ಲಿ ಅನಿರೀಕ್ಷಿತವಾಗಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ಆಗ ಅವರು ಮಾಡಿದ ಕೆಲಸ ರೌಡಿಗಳ ಹಾವಳಿ ನಿಯಂತ್ರಣ ಮಾಡಿದ್ದು. ರೌಡಿ ನಿಗ್ರಹ ದಳ ಸ್ಥಾಪಿಸಿ ದಕ್ಷ ಅಧಿಕಾರಿಗಳನ್ನು ನೇಮಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಮುಂದೆ ಎರಡೇ ವರ್ಷಗಳಲ್ಲಿ ರಾಜಕೀಯ ಕಾರಣಕ್ಕಾಗಿ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದಾಗ ಅವರು ಮೇಲುಗೈ ಪಡೆಯಲು ಗೂಂಡಾ ನಿಯಂತ್ರಣವು ಒಂದು ಪ್ರಮುಖ ಕಾರಣವಾಗಿತ್ತು…

ಬಿಜೆಪಿ ಪಕ್ಷದ ಬಗ್ಗೆ ಈಗ ಹೇಗೆ ಕೋಮು ಗಲಭೆಗಳನ್ನು ಸೃಷ್ಟಿಸಿ ಅಧಿಕಾರಕ್ಕೇರುವ ಪಕ್ಷ ಎಂಬ ಆರೋಪವಿದೆಯೋ ಹಾಗೇ ಕಾಂಗ್ರೇಸ್ ಪಕ್ಷಕ್ಕೆ ಅದು ಅಧಿಕಾರಕ್ಕೆ ಬಂದಾಗ ರೌಡಿಗಳ ಹಾವಳಿ ಹೆಚ್ಚಾಗುತ್ತದೆ ಎಂಬ ಆರೋಪವೂ ಇದೆ.‌ ಅದು ಸಂಪೂರ್ಣ ಸತ್ಯವಲ್ಲದೇ ಇರಬಹುದು ಮತ್ತು ಎಲ್ಲಾ ಸರ್ಕಾರಗಳಲ್ಲು ಅದು ಸ್ವಲ್ಪ ಮಟ್ಟಿಗೆ ಇರುತ್ತದೆ. ಆದರೆ ಇತ್ತೀಚಿನ ಮಾಧ್ಯಮಗಳ ಸುದ್ದಿಯನ್ನು ನೋಡುತ್ತಿದ್ದರೆ ಗೂಂಡಾಗಳ ಪುಂಡಾಟಿಕೆ ಹೆಚ್ಚಾಗುತ್ತಿದೆ ಅನಿಸುತ್ತದೆ….

ಸಾಮಾನ್ಯ ಜನ ಅದರಲ್ಲೂ ಕರ್ನಾಟಕದ ಜನ ಬಹುತೇಕ ಶಾಂತಿ ಪ್ರಿಯರು. ಮೃದು ಸ್ವಭಾವದವರು. ಈ‌ ರೀತಿಯ ಪುಂಡಾಟಿಕೆ ಅವರಲ್ಲಿ ಭಯ ಮೂಡಿಸಬಹುದು. ರಸ್ತೆಗಳಲ್ಲಿ ಓಡಾಡುವಾಗ ಅಭದ್ರತೆ ಕಾಡಬಹುದು. ಅಭಿವೃದ್ಧಿ ಮತ್ತು ‌ಸಾಮಾಜಿಕ ನ್ಯಾಯದ ಯೋಜನೆಗಳ ಜಾರಿಯ ಅಲೆಯಲ್ಲಿಯೇ ಸರ್ಕಾರ ಮೈ ಮನಸ್ಸು ಮರೆಯಬಾರದು ಎಂಬ ಎಚ್ಚರಿಕೆಗಾಗಿ ಈ ಒಂದು ಸಂದೇಶ…….

ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಈ ಸಮಯದಲ್ಲಿ, ಬಹುತೇಕ ಸಿಸಿ ಟಿವಿಗಳು ವ್ಯಾಪಕವಾಗಿ ಅಳವಡಿಸಿರುವಾಗ ಎಲ್ಲಾ ಘಟನೆಗಳು ಸಾರ್ವಜನಿಕವಾಗಿ ನೋಡುವ ಅವಕಾಶವಿದೆ. ಯಾರೋ ಕೆಲವು ಪುಂಡರು ಅಮಾಯಕರನ್ನು ಬೆದರಿಸುವ, ಹಲ್ಲೆ ನಡೆಸುವ, ದೋಚುವ ದೃಶ್ಯಗಳು ವೈರಲ್ ಆಗಿ ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗಬಹುದು…..

ಇದರಲ್ಲಿ ಮುಂದುವರಿದ ಭಾಗವಾಗಿ ಮತ್ತೊಂದು ವಿಷಯ ಅಂತರ್ಗತವಾಗಿದೆ. ಅದು ಏನೆಂದರೆ ಈ ರೀತಿ ತೊಂದರೆಗೊಳಗಾದ ವ್ಯಕ್ತಿಗಳು ಸಹಜವಾಗಿ ಪೋಲೀಸರ ಸಹಾಯ ಯಾಚಿಸುತ್ತಾರೆ. ಈಗಿನ ಸಂದರ್ಭದಲ್ಲಿ ಪೋಲೀಸ್ ಠಾಣೆಗಳಲ್ಲಿ ನಾವು ನಿರೀಕ್ಷಿಸಿದಷ್ಟು ಸುಲಭವಾಗಿ ಮತ್ತು ಶೀಘ್ರವಾಗಿ ಪ್ರತಿಕ್ರಿಯೆ ಅಥವಾ ನ್ಯಾಯ ಸಿಗುವುದಿಲ್ಲ. ಅಲ್ಲಿ ಮತ್ತೆ ಜನ ಸಾಮಾನ್ಯರ ಅಸಹನೆ ಹೆಚ್ಚಾಗುತ್ತದೆ. ಅದನ್ನು ಅವರು ತಮ್ಮ ಸಂಬಂಧಿಗಳು ಮತ್ತು ಪರಿಚಿತರಿಗೆಲ್ಲಾ ದೂರವಾಣಿಯ ಹೇಳುತ್ತಾರೆ. ಅದು ಬಾಯಿ ಮಾತಿನಲ್ಲಿ ಹರಡುತ್ತಾ ಹೋಗುತ್ತದೆ…..

ಆಡಳಿತ ನಡೆಸುವವರು ಅರಿಯಬೇಕಾದ ಬಹುಮುಖ್ಯ ವಿಷಯವೆಂದರೆ, ಪೋಲೀಸ್ ವ್ಯವಸ್ಥೆ ಇರುವುದು ಕೇವಲ ಅಪರಾಧಿಗಳನ್ನು ಹಿಡಿಯಲು ಮಾತ್ರವಲ್ಲ ಅದಕ್ಕಿಂತ ಹೆಚ್ಚಾಗಿ ಅಪರಾಧಗಳನ್ನು ತಡೆಯುವುದು ಅವರ ಮೊದಲ ಆಧ್ಯತೆಯಾಗಬೇಕು. ಅಂದರೆ ಅಷ್ಟರ ಮಟ್ಟಿಗೆ ಜಾಗೃತವಾಗಿರಬೇಕು ಮತ್ತು ಅಪರಾಧಿಗಳಲ್ಲಿ ಭಯ ಮೂಡಿರಬೇಕು. ಇಲ್ಲದಿದ್ದರೆ ಪೋಲೀಸ್ ವ್ಯವಸ್ಥೆ ಅರ್ಧ ನಿಷ್ಕ್ರಿಯವಾದಂತೆ……

ಒಬ್ಬ ವ್ಯಕ್ತಿ ಸೂಕ್ತ ಕಾರಣವೇ ಇಲ್ಲದೇ ತನ್ನ ಲಾಭಕ್ಕಾಗಿ ಯಾವುದೇ ಹೆದರಿಕೆ ಇಲ್ಲದೇ ಇನ್ನೊಬ್ಬ ವ್ಯಕ್ತಿಯ ಮೇಲೆ ಯಾವುದೇ ರೀತಿಯ ದೌರ್ಜನ್ಯ ಮಾಡುತ್ತಾನೆ ಎಂದಾದರೆ ಅದು ಆಡಳಿತ ಮತ್ತು ಮುಖ್ಯವಾಗಿ ಪೋಲೀಸ್ ವ್ಯವಸ್ಥೆಗೆ ಮಾಡುವ ಅವಮಾನ ಮತ್ತು ಅದನ್ನು ದಿಕ್ಕರಿಸುವ ಅಹಂಕಾರ ಮತ್ತು ಅಪರಾಧ. ಅದನ್ನು ನಿಗ್ರಹಿಸಲೇ ಬೇಕು. ಮಾದಕ ವಸ್ತುಗಳ ಮಾರಾಟಗಾರರು, ಬೈಕ್ ವೀಲ್ಹಿಂಗ್ ಮಾಡುವವರು, ರೋಲ್ ಕಾಲ್ ಮಾಡುವವರು, ರೌಡಿಸಂ ಮಾಡುವವರು ಇರಲೇ ಬಾರದು. ಇದ್ದರೆ ಅವರನ್ನು ಬುಡ ಸಮೇತ ಕಿತ್ತು ಹಾಕಬೇಕು. ಆಗಲೇ ನಾಗರಿಕ ಸಮಾಜಕ್ಕೆ ಒಂದು ಅರ್ಥ ಇರುತ್ತದೆ….

ಆ ನಿಟ್ಟಿನಲ್ಲಿ ಪೋಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಒಟ್ಟಾಗಿ ಸೇರಿ ಸಂಪ್ರದಾಯಿಕ ಶೈಲಿಗೆ ಹೊರತಾದ ಹೊಸ ವಿಧಾನಗಳನ್ನು ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಬೇಕು. ಅದನ್ನು ಶಾಸಕಾಂಗಕ್ಕೆ ಶಿಫಾರಸ್ಸು ಮಾಡಬೇಕು. ಜನಾಭಿಪ್ರಾಯ ರೂಪಿಸಬೇಕು. ಯಾವುದೇ ಕಾರಣಕ್ಕೂ ಅಸಹಾಯಕತೆ ಪ್ರದರ್ಶಿಸಬಾರದು….

ಗೃಹ ಮಂತ್ರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಂವಿಧಾನದ ಪೀಠಿಕೆಯನ್ನು ಕೇವಲ ಓದುವುದು ಮಾತ್ರವಲ್ಲ ಅದನ್ನು ಅನುಷ್ಠಾನಗೊಳಿಸುವುದು ಮುಖ್ಯವಾಗಬೇಕು. ಪೋಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಎಲ್ಲಾ ‌ಸಾರ್ಥ್ಯವಿದೆ. ದುರಾದೃಷ್ಟವಶಾತ್ ರಾಜಕೀಯ, ವರ್ಗಾವಣೆ, ಭ್ರಷ್ಟಾಚಾರ, ಜಾತಿವಾದದ ಕಾರಣದಿಂದಾಗಿ ಅದು ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಬಹುತೇಕ ವಿಫಲವಾಗಿದೆ. ಜನರ ನಂಬಿಕೆ ಕಳೆದುಕೊಂಡಿದೆ. ಅದರ ಅಮೂಲಾಗ್ರ ಬದಲಾವಣೆ ಮಾಡಿದಲ್ಲಿ ಖಂಡಿತ ಈಗಿನ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ದರೆ ಜನರ ಅಸಹನೆ ದಿನೇ ದಿನೇ ಹೆಚ್ಚಾಗುತ್ತದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: