Sports NewsState News

ಸೂಪರ್‌ ಲೀಗ್‌ ಹಂತಕ್ಕೆ ಬೆಂಗಳೂರು ತಂಡ

WhatsApp Group Join Now
Telegram Group Join Now

ತುಮಕೂರು: ‘ಸಾಹೇ’ ವಿಶ್ವವಿದ್ಯಾಲಯ ನೇತೃತ್ವದಲ್ಲಿ ನಗರದ ಹೊರವಲಯದ ಅಗಳಕೋಟೆಯ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಶಿಪ್‌ ಅಂತಿಮ ಘಟ್ಟ ತಲುಪಿದ್ದು, ಶುಕ್ರವಾರ ಫೈನಲ್‌ ಪಂದ್ಯ ನಡೆಯಲಿದೆ.

 

ಕ್ವಾರ್ಟರ್ ಫೈನಲ್‍ನಲ್ಲಿ 8 ತಂಡಗಳ ಆಟಗಾರರ ಮಧ್ಯೆ ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರಾಣಿ ಚೆನ್ನಮ್ಮ ವಿ.ವಿ ಮತ್ತು ಬೆಂಗಳೂರು ವಿ.ವಿ ನಡುವಿನ ಪಂದ್ಯ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿತು. ಪಂದ್ಯದ ಎರಡನೇ ಸುತ್ತಿನಲ್ಲಿ 15-15 ಅಂಕಗಳಿಂದ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆಟಗಾರರು ಉತ್ತಮ ಪ್ರದರ್ಶನ ತೋರಿದರು. ಕೊನೆಗೆ ಬೆಂಗಳೂರು ತಂಡ 37 ಅಂಕ ಗಳಿಸಿ 5 ಪಾಯಿಂಟ್‍ಗಳ ಅಂತರದಲ್ಲಿ ಗೆಲುವಿನ ದಡ ಸೇರಿತು.

ಮೈಸೂರು ಮತ್ತು ಮಂಗಳೂರು ತಂಡದ ನಡುವೆ ನಡೆದ ಪಂದ್ಯದಲ್ಲಿ 39-35 ಪಾಯಿಂಟ್‍ಗಳ ಅಂತರದಲ್ಲಿ ಮಂಗಳೂರು ವಿ.ವಿ ವಿಜಯಮಾಲೆ ಧರಿಸಿ, ಸೂಪರ್‌ ಲೀಗ್‌ ಹಂತ ಪ್ರವೇಶಿಸಿತು. ಸೋಲಿನೊಂದಿಗೆ ಮೈಸೂರು ತಂಡ ಟೂರ್ನಿಯಿಂದ ನಿರ್ಗಮಿಸಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಹಾಗೂ ಕೇರಳದ ಕ್ಯಾಲಿಕಟ್ ವಿ.ವಿ ಮಧ್ಯದ ಪಂದ್ಯ ಜಿದ್ದಾ ಜಿದ್ದಿನಿಂದ ಕೂಡಿತ್ತು. ವಿಟಿಯು ತಂಡವು 4 ಪಾಯಿಂಟ್‌ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಮತ್ತೊಂದು ಪಂದ್ಯದಲ್ಲಿ 32-24 ಅಂಕಗಳ ಅಂತರದಲ್ಲಿ ಬೆಂಗಳೂರು ನಗರ ವಿ.ವಿ ತಂಡವನ್ನು ಮಹಾರಾಷ್ಟ್ರದ ಸಾವಿತ್ರಿ ಬಾಯಿ ಫುಲೆ ವಿ.ವಿ ತಂಡ ಸೋಲಿಸಿ, ಸೂಪರ್ ಲೀಗ್ ಹಂತಕ್ಕೆ ಪ್ರವೇಶ ಪಡೆಯಿತು.

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಚಾಂಪಿಯನ್‌ಶಿಪ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳ ಭಾಗವಹಿಸಿದ್ದರು. ಪ್ರಶಸ್ತಿಗಾಗಿ ಶುಕ್ರವಾರ ನಾಲ್ಕು ತಂಡಗಳು ಮುಖಾಮುಖಿಯಾಗಲಿವೆ.

WhatsApp Group Join Now
Telegram Group Join Now
Back to top button