Health & Fitness

ಪೋಷಕರೇ ಮಕ್ಕಳ ಮೇಲೆ ಇರಲಿ ಎಚ್ಚರ! ಸ್ಮಾರ್ಟ್‌ಫೋನ್ ಚಟದಿಂದ ನಾಲ್ಕು ಮಕ್ಕಳಲ್ಲಿ ಓರ್ವರಿಗೆ ದೃಷ್ಟಿ ಸಮಸ್ಯೆ

WhatsApp Group Join Now
Telegram Group Join Now

ಸ್ಮಾರ್ಟ್‌ಫೋನ್‌ (smartphone)ಇಂದು ಎಲ್ಲರಲ್ಲೂ ತನ್ನ ವಿಶೇಷತೆ ಮೂಲಕ ಸೆಳೆದುಬಿಟ್ಟಿದೆ. ಈ ನಡುವೆ ಪ್ರಮುಖ ಕಂಪೆನಿಗಳು ಭಿನ್ನ ಫೀಚರ್ಸ್‌ ಆಯ್ಕೆ ಇರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿವೆ. ಈ ನಡುವೆ ಮಕ್ಕಳ ಸ್ಮಾರ್ಟ್‌ಫೋನ್‌ ಬಳಕೆ ಸಂಬಂಧ ಶಾಕಿಂಗ್‌ ವಿಚಾರ ಹೊರಬಿದ್ದಿದೆ.

 

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಮಕ್ಕಳಲ್ಲಿ ಹೆಚ್ಚಾಗಿದ್ದು, ಈಗಾಗಲೇ ವಿವಿಧ ರೀತಿಯ ಸಮಸ್ಯೆಗಳಿಂದ ಕೆಲವರು ಬಳಲುತ್ತಿದ್ದಾರೆ. ಅದರಂತೆ ಈಗ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ನಾಲ್ಕು ಮಕ್ಕಳಲ್ಲಿ ಓರ್ವ ಮಗು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಹಾಗಿದ್ರೆ ಏನಿದು ಹೊಸ ವಿಚಾರ?, ನಿಮ್ಮ ಮಕ್ಕಳನ್ನು ಈ ರೀತಿಯ ಸಮಸ್ಯೆಯಿಂದ ಹೊರತರುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿ ಕಾಯಿಲೆ:

2001 ರಲ್ಲಿ AIIMS ನ ಆರ್‌ಪಿ ಕೇಂದ್ರವು ಮಕ್ಕಳಲ್ಲಿ ಸಮೀಪದೃಷ್ಟಿ ಕಾಯಿಲೆಗೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸಿದ್ದು, ದೆಹಲಿಯ 7% ಮಕ್ಕಳಲ್ಲಿ ಈ ರೋಗ ಇರುವುದನ್ನು ಕಂಡುಕೊಳ್ಳಲಾಗಿದೆ. ಇದಾದ ಹತ್ತು ವರ್ಷಗಳ ನಂತರ ಅಂದರೆ 2011ರಲ್ಲಿ ಆರ್ ಪಿ ಸೆಂಟರ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.13.5ರಷ್ಟು ಮಕ್ಕಳು ಸಮೀಪದೃಷ್ಟಿಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇದೆಲ್ಲಾ ಆದ ಮೇಲೆ ಅಂದರೆ 2023 ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಅಂಕಿ ಅಂಶವು 20 ರಿಂದ 22 ಪ್ರತಿಶತಕ್ಕೆ ಏರಿಕೆ ಆಗಿದ್ದು, ಈ ಮೂಲಕ ಶಾಕಿಂಗ್‌ ವರದಿ ಹೊರಬಿದ್ದಿದೆ. ಅಂದರೆ ಹಳ್ಳಿಗಳಲ್ಲಿಯೂ ಮಕ್ಕಳಿಗೆ ಕನ್ನಡಕದ ಅವಶ್ಯಕತೆ ಹೆಚ್ಚಾಗುತ್ತಿದೆ.

ಈ ಅಧ್ಯಯನದಲ್ಲಿ ಕಂಡುಬಂದ ವಿಚಾರ ಏನೆಂದರೆ ನಗರಗಳಲ್ಲಿ ನಾಲ್ಕು ಮಕ್ಕಳಲ್ಲಿ ಒಬ್ಬರು ಮತ್ತು ಹಳ್ಳಿಗಳಲ್ಲಿ ಏಳರಲ್ಲಿ ಒಬ್ಬರು ಕನ್ನಡಕವನ್ನು ಧರಿಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಈ ಹಿಂದೆ 12 ರಿಂದ 13 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದಿತ್ತು. ಆದರೆ ಈಗ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆ ಆರಂಭ ಆಗಿದ್ದು, ಇದಕ್ಕೆ ಹೆಚ್ಚಿನ ಸ್ಕ್ರೀನ್ ಟೈಮ್ ಕಾರಣ ಎಂದು ಕಂಡುಕೊಳ್ಳಲಾಗಿದೆ.

ಅಂದರೆ ಮಕ್ಕಳು ನಿರಂತರವಾಗಿ ಎರಡರಿಂದ ಮೂರು ಗಂಟೆಗಳ ಕಾಲ ಮೊಬೈಲ್‌ನಲ್ಲಿ ಗೇಮ್‌ ಆಡುವುದು ಅಥವಾ ವಿಡಿಯೋ ನೋಡುವ ಕೆಲಸ ಮಾಡುತ್ತಾರೆ. ಇದು ಈಗ ಮಕ್ಕಳ ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಸಮಸ್ಯೆಗಳನ್ನು ಆರಂಭದಲ್ಲೇ ಅರಿತುಕೊಂಡು ಪೋಷಕರು ತಮ್ಮ ಮಕ್ಕಳಿಗೆ ಕನ್ನಡಕವನ್ನು ಮೊದಲೇ ಧರಿಸುವಂತೆ ಒತ್ತಾಯಿಸುವುದಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಇನ್ನು ಈ ಅಧ್ಯಯನದಲ್ಲಿ ಮೂರು ಸಾವಿರ ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಗಿದೆ ಎಂದು ಆರ್ ಪಿ ಸೆಂಟರ್ ನ ಮಕ್ಕಳ ನೇತ್ರ ರೋಗಗಳ ತಜ್ಞ ಪ್ರಾಧ್ಯಾಪಕ ಡಾ.ರೋಹಿತ್ ಸಕ್ಸೇನಾ ಮಾಹಿತಿ ನೀಡಿದ್ದಾರೆ. ಹಾಗೆಯೇ ಒಂದನೇ ತರಗತಿಯ ಮಕ್ಕಳಿಗೆ ಶಾಲೆಯಲ್ಲಿ ಪ್ರತಿದಿನ ಅರ್ಧ ಗಂಟೆ ತರಗತಿಯ ಹೊರಗೆ ಆಟವಾಡಲು ಸಮಯ ನೀಡಲಾಗುತ್ತಿತ್ತು. ಈ ವೇಳೆ ಮಕ್ಕಳು ಯೋಗಾಸನವನ್ನೂ ಮಾಡುತ್ತಿದ್ದರು. ಆದರೆ ಬೇರೆ ತರಗತಿಯ ಮಕ್ಕಳಿಗೆ ಈ ರೀತಿ ಮಾಡಲಿಲ್ಲ. ಇದರಿಂದ ತಿಳಿದುಬಂದ ಮಾಹಿತಿ ಏನೆಂದರೆ ಒಂದನೇ ತರಗತಿಯ ಮಕ್ಕಳಿಗೆ ಹೊಸ ಕನ್ನಡಕ ಅಥವಾ ಕನ್ನಡಕಗಳ ಅಗತ್ಯವೇ ಬರಲಿಲ್ಲ ಅನ್ನೋದು.

ಮಕ್ಕಳು ಪ್ರತಿದಿನ ಅರ್ಧ ಗಂಟೆ ಹೊರಗೆ ಆಟವಾಡುತ್ತಿದ್ದರೆ ಅವರ ದೃಷ್ಟಿ ಚೆನ್ನಾಗಿ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹಾಗೆಯೇ ಪ್ರತಿದಿನ ಎರಡು ಗಂಟೆಗಳ ಕಾಲ ಹೊರಗೆ ಆಟವಾಡುತ್ತಿದ್ದರೆ ಹಾಗೂ ಸ್ಕ್ರೀನ್‌ ಟೈಮ್‌ ಅನ್ನು ಕಡಿಮೆ ಮಾಡಿದ್ದರೆ, ದೀರ್ಘಕಾಲದವರೆಗೆ ಹೊಸ ಕನ್ನಡಕ ಬಳಕೆ ಮಾಡುವ ಅಥವಾ ಕನ್ನಡಕಗಳನ್ನು ಖರೀದಿಸುವ ಅಗತ್ಯವಿಲ್ಲ ಎಂದು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

ಈ ನಡುವೆ ಸಮೀಪದೃಷ್ಟಿ ಕಾಯಿಲೆಯ ಗುಣಲಕ್ಷಣಗಳನ್ನು ವೈದ್ಯರು ತಿಳಿಸಿದ್ದು, ಪುಸ್ತಕವನ್ನು ಹತ್ತಿರದಿಂದ ಓದುತ್ತಿದ್ದರೆ ಅಥವಾ ಮಲಗಿರುವಾಗ, ಕಣ್ಣುಗಳಲ್ಲಿ ಚುಚ್ಚುವ ಅನಭವವಾದರೆ ಇವುಗಳು ದುರ್ಬಲ ದೃಷ್ಟಿಯ ಲಕ್ಷಣಗಳಾಗಿರಬಹುದು ಎಂದಿದ್ದಾರೆ. ಅಲ್ಲದೆ ನೀವು ದೀರ್ಘಕಾಲದವರೆಗೆ ಮೊಬೈಲ್, ಪುಸ್ತಕ ಅಥವಾ ಟಿವಿ ಸ್ಕ್ರೀನ್‌ ಅನ್ನು ತುಂಬಾ ಹತ್ತಿರದಿಂದ ನೋಡಿದರೆ ದೂರದ ದೃಷ್ಟಿ ಮಸುಕಾಗಲು ಪ್ರಾರಂಭಿಸುತ್ತದೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಈ ನಡುವೆ ಭಾರತದಲ್ಲಿ, 45 ವರ್ಷಕ್ಕಿಂತ ಮೇಲ್ಪಟ್ಟ 34% ಜನರು ದುರ್ಬಲ ದೃಷ್ಟಿ ಹೊಂದಿದ್ದಾರೆ. AIIMS ನ ನೇತ್ರಶಾಸ್ತ್ರ ವಿಭಾಗದ ಅಂದಾಜಿನ ಪ್ರಕಾರ, 2050 ರ ವೇಳೆಗೆ, ಭಾರತದ ಶೇಕಡಾ 40 ರಷ್ಟು ಮಕ್ಕಳು ದುರ್ಬಲ ಕಣ್ಣುಗಳನ್ನು ಹೊಂದಿರುತ್ತಾರಂತೆ. ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್‌ನ ಸ್ಕ್ರೀನ್‌ಗೆ ಅಂಟಿಕೊಳ್ಳುವುದನ್ನು ಈ ಮೂಲಕ ಕಡಿಮೆ ಮಾಡಬೇಕಿದೆ. ಅದಾಗ್ಯೂ ಡಿಸ್‌ಪ್ಲೇ ದೊಡ್ಡದಾಗಿದ್ದರೆ ಸಮಸ್ಯೆ ಕಡಿಮೆ ಇರುತ್ತದೆ ಎಂದೂ ಸಹ ತಿಳಿಸಲಾಗಿದೆ.

20-20-20 ಸೂತ್ರದ ಸಲಹೆ:

ಹೆಚ್ಚಿನ ಜನರು ಲ್ಯಾಪ್‌ಟಾಪ್‌ ಮುಂದೆ ಅಥವಾ ಮೊಬೈಲ್‌ನಲ್ಲೇ ಕೆಲಸ ಮಾಡುತ್ತಾರೆ. ಅಂತಹವರು 20-20-20 ಸೂತ್ರವನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಕೆಲವರು ಏನಿದು 20-20-20 ಸೂತ್ರ ಎಂದರೆ 20 ನಿಮಿಷಗಳ ಕಾಲ ಸ್ಕ್ರೀನ್‌ ಅನ್ನು ವೀಕ್ಷಣೆ ಮಾಡಿದ ಬಳಿಕ 20 ಸೆಕೆಂಡ್ ವಿರಾಮ ತೆಗೆದುಕೊಂಡು 20 ಅಡಿ ದೂರದಲ್ಲಿ ಇರುವ ಏನನ್ನಾದರೂ ವೀಕ್ಷಣೆ ಮಾಡುವುದೇ ಆಗಿದೆ.

AIIMS ನ ನೇತ್ರಶಾಸ್ತ್ರ ವಿಭಾಗದ ಪ್ರಕಾರ, ಒಂದು ದಿನದಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಮೊಬೈಲ್ ಸ್ಕ್ರೀನ್‌ಗೆ ಅಂಟಿಕೊಳ್ಳಬಾರದು. ಹಾಗೆಯೇ ಪ್ರತಿ 20 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಬೇಕಿದೆ. ಗಮನಿಸಬೇಕಾದ ವಿಷಯ ಏನೆಂದರೆ ಪ್ರತಿ ನಿಮಿಷಕ್ಕೆ ನಮ್ಮ ರೆಪ್ಪೆಗಳು ನಿಮಿಷಕ್ಕೆ 15 ರಿಂದ 16 ಬಾರಿ ಮಿಟುಕಿಸುತ್ತಿದ್ದವು. ಸ್ಕ್ರೀನ್‌ ಬಳಕೆ ಹೆಚ್ಚಾದಂತೆ ನಿಮಿಷಕ್ಕೆ 6 ರಿಂದ 7 ಬಾರಿ ಮಾತ್ರ ಮಿಟುಕಿಸುವುದೇ ತ್ರಾಸದಾಯಕವಾದ ವಿಷಯವಾಗಿದೆ. ಇದರಿಂದ ಕಣ್ಣಿನ ತೊಂದರೆ ಇನ್ನಷ್ಟು ಹೆಚ್ಚಾಗುತ್ತಲಿದೆ.

WhatsApp Group Join Now
Telegram Group Join Now
Back to top button